ಮಂಜೇಶ್ವರ: ಭೂಗರ್ಭ ಜಲ ಸಂರಕ್ಷಣೆಗಾಗಿ ಜಿಲ್ಲಾಡಳಿತ ಆರಂಭಿಸಿರುವ ಬಿದಿರು ನೆಡುವ ಕಾರ್ಯಕ್ರಮದ ಅಂಗವಾಗಿ ವರ್ಕಾಡಿ ಗ್ರಾ.ಪಂ. ವ್ಯಾಪ್ತಿಯ ಕೋಣಿಬೈಲು ಸೊಡಂಕೂರಿನಲ್ಲಿ ಏಳು ಎಕ್ರೆ ಸ್ಥಳದಲ್ಲಿ ಸುಮಾರು 1800 ಗಿಡಗಳನ್ನು ನೆಡುವ ಮೂಲಕ ಪಂ. ಮಟ್ಟದ ಬಿದಿರು ಕೃಷಿ ಬೆಳೆಗೆ ಶನಿವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ವರ್ಕಾಡಿ ಗ್ರಾ.ಪಂ. ನ ವಾರ್ಡ್ ಮಟ್ಟದಲ್ಲಿ ಆಯಾ ವಾರ್ಡುಗಳಲ್ಲಿ ಸುಮಾರು 20,000 ಬಿದಿರಿನ ಗಿಡಗಳನ್ನು ನೆಡಲಾಯಿತು. ಇದಕ್ಕೆ ಅಯಾ ವಾರ್ಡಿನ ಸದಸ್ಯರುಗಳು ನೇತೃತ್ವವನ್ನು ನೀಡಿದರು.
ಕೋಣಿಬೈಲು ಸೊಡಂಕೂರಿನಲ್ಲಿ ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಮಜೀದ್ ಬಿ.ಎ. ಬಿದಿರು ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಮಹತ್ವದ ಯೋಜನೆಯೊಂದು ಉದ್ಘಾಟನೆ ನೆರವೇರಿದೆ. ನೆಲ ಜಲ ಸಂರಕ್ಷಣೆಯ ಕನಸನ್ನು ಸಾಕಾರ ಮಾಡಲು ಇಂದು ಜಿಲ್ಲೆಯ ಜನತೆ ಮುಂದಾಗಿದೆ. ತೀವ್ರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಜಿಲ್ಲೆಯ ಸಮಗ್ರ ಚಿತ್ರಣ ಬದಲಿಸುವ ನಿಟ್ಟಿನಲ್ಲಿ, ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತ ಮಟ್ಟದ ಬಿದಿರು ರಾಜಧಾನಿಯಾಗಿಸುವ ಜಿಲ್ಲಾಡಳಿತದ ಬಹುದೊಡ್ಡ ಕನಸು ಈ ಮೂಲಕ ನನಸಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂ. ಕಾರ್ಯದರ್ಶಿ ರಾಜೇಶ್ವರಿ, ಸದಸ್ಯರಾದ ಭಾರತಿ, ಸೀತಾ, ಮೈಮೂನ, ರಹ್ಮತ್ ರಜಾಕ್, ಕೃಷಿ ಅಧಿಕಾರಿ ಶಫೀಕ್, ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳಾದ ರಾಜೇಶ್, ಅನ್ವರ್, ಕಾರ್ಮಿಕರಾದ ಅಶೋಕ, ಸುಧಾಮಣಿ, ಶುಭಶ್ರೀ ಮೊದಲಾದವರು ಪಾಲ್ಗೊಂಡರು.


