ಕುಂಬಳೆ: ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಪಿಎನ್ ಪಣಿಕ್ಕರ್ ಸಂಸ್ಮರಣೆ ಮತ್ತು ವಾಚನ ಸಪ್ತಾಹ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕೇರಳದಾದ್ಯಂತ ಓದುವಿಕೆಯ ಮಹತ್ವವನ್ನು ಸಾರುವುದರ ಜೊತೆಗೆ ಗ್ರಂಥಾಲಯ ಅಭಿಯಾನಕ್ಕಾಗಿ ನಿರಂತರ ಸಂಚಾರ ಮಾಡಿದ ಮಹಾನ್ ವ್ಯಕ್ತಿ ಪಿಎನ್ ಪಣಿಕ್ಕರ್ ಅವರ ಪುಣ್ಯತಿಥಿಯನ್ನು ವಾಚನ ದಿನವಾಗಿಯೂ ಅಲ್ಲಿಂದ ಒಂದು ವಾರದ ತನಕ ವಾಚನ ಸಪ್ತಾಹವಾಗಿಯೂ ಆಚರಿಸುವುದು ಹೊಸ ಪೀಳಿಗೆಗೆ ಓದಿನ ಮಹತ್ವದ ಅರಿವು ಮೂಡಿಸುವುದಕ್ಕಾಗಿ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು. ಶಾಲಾ ಗ್ರಂಥಾಲಯದ ಪುಸ್ತಕಗಳ ಪ್ರದರ್ಶನ, ಕನ್ನಡ ಮತ್ತು ಮಲಯಾಳದ ಮಹಾನ್ ಸಾಹಿತಿಗಳ ಭಾವಚಿತ್ರ ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮವೇ ಮೊದಲಾದುವುಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿಎ ಪೇರಾಲ್ ಮತ್ತು ವಿನುಕುಮಾರ್ ಮಾಸ್ತರ್ ಬಹುಮಾನ ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರುಕ್ಮಿಣಿ ಟೀಚರ್ ಸ್ವಾಗತಿಸಿ ದೀಪಾ ಟೀಚರ್ ವಂದಿಸಿದರು.


