ಕುಂಬಳೆ: ಬಾಡೂರು ಪದವು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರದ ಸಮಾರೋಪ ಸಮಾರಂಭ ಸೋಮವಾರ ನಡೆಯಿತು.
ಸಮಾರೋಪ ಸಮಾರಂಭವನ್ನು ಕನ್ನಡ ಸಾಹಿತಿ, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಉದ್ಘಾಟಿಸಿದರು. ಪೆರ್ಲ ಶಾಲಾ ಶಿಕ್ಷಕ, ನಾಟಕ ಕಲಾವಿದ ಉದಯ ಸಾರಂಗ್, ಪೆರ್ಲ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿ ಶುಭಹಾರೈಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುಧೀರ್ ಎನ್ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಶಾಂತಾ ಟೀಚರ್ ವಂದಿಸಿದರು. ವಾಚನ ವಾರದ ಭಾಗವಾಗಿ ನಡೆದ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಕೃಷ್ಣಪ್ಪ ಬಂಬಿಲ ಬಹುಮಾನ ವಿತರಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಕೈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ಪ್ರಬಂಧಕ ನಾರಾಯಣ ನಂಬ್ಯಾರ್ ಉಪಸ್ಥಿತರಿದ್ದರು. ಹಲವು ಸಂದೇಶ ನೀಡುವ ಗೀತೆಗಳನ್ನು ಹಾಡಿ ಕೃಷ್ಣಪ್ಪ ಬಂಬಿಲ ಅವರು ಮಕ್ಕಳ ಮನರಂಜಿಸಿದರು.



