ಬದಿಯಡ್ಕ: ಕಷ್ಟ ಬಂದರೆ ಏನನ್ನೂ ಸಾಧಿಸಬಹುದು. ಸ್ಪಷ್ಟವಾದ ಗುರಿ ಹಾಗೂ ಅದನ್ನು ಸಾದಿಸುವ ಹಟ, ಛಲ ನಮ್ಮಲ್ಲಿ ಗಟ್ಟಿಯಾಗಿರಬೇಕು. ಪ್ರಯತ್ನ ಮತ್ತು ದಿಟ್ಟ ನಿರ್ಧಾರಗಳು ಜೊತೆ ಸೇರಿದಾಗ ಗೆಲುವು ನಮ್ಮದಾಗುತ್ತದೆ ಎಂದು ಸೀತಾರಾಮ ಮಾಸ್ತರ್ ಹೇಳಿದರು.
ಅವರು ಬದಿಯಡ್ಕ ಗುರುಸದನದಲ್ಲಿ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಉದನೇಶ್ವರ ಶಾಖೆಯಲ್ಲಿ ಇತ್ತೀಚೆಗೆ ಆಯೋಜಿಸಿದ ಕರ್ನಾಟಕ ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿನಿ ಡಾ.ರಮ್ಯಾ ಅವರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆ ಯಾವುದು, ಎಷ್ಟು ಹಣ ಖರ್ಚು ಮಾಡುತ್ತೇವೆ ಎಂಬುದಲ್ಲ ಬದಲಾಗಿ ಎಷ್ಟರ ಮಟ್ಟಿಗೆ ಶಿಕ್ಷಕರ ಸಹಕಾರ, ಹೆತ್ತವರ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳ ಪರಿಶ್ರಮವಿರುತ್ತದೆ ಎನ್ನುವುದರ ಮೇಲೆ ಗೆಲುವು ನಿರ್ಧಾರವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.
ರ್ಯಾಂಕ್ ವಿಜೇತೆಯನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಡಾ.ರಮ್ಯಾಳ ತಂದೆ ಗುರುಸದನದ ಮಾಲಿಕ ರಾಮ ಭಟ್ ಉಪಸ್ಥಿತರಿದ್ದರು. ಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಸ್ವಾಗತಿಸಿ, ಕು.ಅಭಿಜ್ಞಾ ವಂದಿಸಿದರು. ನಾಟ್ಯನಿಲಯಂ ಉದನೇಶ್ವರ ಶಾಖೆಯ ವಿದ್ಯಾರ್ಥಿಗಳು ಹಾಗೂ ಹೆತ್ತವರು ಭಾಗವಹಿಸಿದರು.


