ಕುಂಬಳೆ: ವಿಶ್ವ ಹಾವು ದಿನಾಚರಣೆಯ ಅಂಗವಾಗಿ ಮಂಗಳವಾರ ಕುಂಬಳೆ ಹೋಲಿ ಫ್ಯಾಮಿಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು "ಹಾವುಗಳನ್ನು ರಕ್ಷಿಸಿ, ಜೈವ ವೈವಿಧ್ಯತೆಯನ್ನು ಕಾಪಾಡಿ" ಎಂಬ ಘೋಷವಾಕ್ಯದೊಂದಿಗೆ ಕುಂಬಳೆ ಪೇಟೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.
ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್, ಕೇರಳ ಅರಣ್ಯ ಮತ್ತು ಜೀವ ವಿಭಾಗ ಹಾಗೂ ಕಣ್ಣೂರಿನ ಮಲಬಾರ್ ಜಾಗೃತಿ ಮತ್ತು ವನ್ಯ ಸಂರಕ್ಷಣಾ ಘಟಕದ ನೇತೃತ್ವದಲ್ಲಿ ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಿಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾವುಗಳ ಕುರಿತಾದ ಮಾಹಿತಿ ಕಾರ್ಯಕ್ರಮ ನಡೆಯಿತು. ಬಳಿಕ ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಪತ್ರಗಳನ್ನು ಹಂಚಲಾಯಿತು. ಹಾವುಗಳು ಆಹಾರ ಶೃಂಖಲೆಯ ಪ್ರಧಾನ ಕೊಂಡಿಯಾಗಿದ್ದು, ಇಲಿ, ಕಪ್ಪೆ ಹಾಗೂ ಹಲ್ಲಿಗಳ ಸಂತಾನ ನಿಯಂತ್ರಿಸುತ್ತದೆ. ಪರಿಸರ ಸಮತೋಲನದಲ್ಲಿ ಪ್ರಧಾನ ಪಾತ್ರವಹಿಸುವ ಸರೀಸೃಪಗಳು ಪರಿಸರ ಜೈವ ವೈವಿದ್ಯತೆಯ ಪ್ರತೀಕಗಳಾಗಿವೆ. ಆದರೆ ಹಾವುಗಳ ಬಗ್ಗೆ ಜನರಲ್ಲಿ ಅತೀವ ಭಯಗಳಿದ್ದು, ಇಂತಹ ಭಯದ ಅಗತ್ಯವಿಲ್ಲ. ಗಾಬರಿಗೊಳಗಾಗದೆ ಚಿಕಿತ್ಸೆ ನೀಡುವ ಬಗ್ಗೆ ಜರೂರು ವಹಿಸಬೇಕು ಮೊದಲಾದ ಮಹತ್ವದ ಅಂಶಗಳು ಜಾಗೃತಿ ಪತ್ರದಲ್ಲಿ ಅಡಕವಾಗಿದೆ. ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ, ಮಾತೃಸಂಘಗಳು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ. ಶಿಕ್ಷಕ, ಪಕ್ಷಿ ನಿರೀಕ್ಷಕ ರಾಜು ಕಿದೂರು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಇಂದು(ಬುಧವಾರ)ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.



