ಮುಳ್ಳೇರಿಯ:ಗಡಿನಾಡು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳ ಹಾಗೂ ಪೋಷಕರ ದಶಕಗಳ ಬೇಡಿಕೆಯೊಂದು ಈಡೇರಿದ್ದು, ಹತ್ತನೇ ತರಗತಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ ಶಿಕ್ಷಣ ಮಾರ್ಗದರ್ಶಿ "ಜ್ಞಾನ ದೀವಿಗೆ" ಪುಸ್ತಕ ಸೋಮವಾರ ಸಂಜೆ ಮುಳ್ಳೇರಿಯದಲ್ಲಿ ಲೋಕಾರ್ಪಣೆಗೊಂಡಿದೆ.
ನಿವೃತ್ತ ಮುಖ್ಯ ಶಿಕ್ಷಕ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅವರು ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಹರಿ ಎಂ. ಅವನಿಗೆ ನೀಡಿ ಜ್ಞಾನ ದೀವಿಗೆ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಗಡಿನಾಡಿನ ಕನ್ನಡ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆ ಪ್ರಸ್ತುತ ಈಡೇರಿದೆ. ಇಲ್ಲಿಯ ಕನ್ನಡ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರತೆಯನ್ನು ನೀಗಿಸುವಲ್ಲಿ ಮಾರ್ಗದರ್ಶಿ ಹೊತ್ತಗೆಯೊಂದು ಪ್ರಕಟಗೊಳ್ಳುತ್ತಿರುವುದು ಭರವಸೆಯ ಜೊತೆಗೆ ಉನ್ನತ ಜ್ಞಾನ ಸಂಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಲಿದೆ. ಈ ಪುಸ್ತಕದ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಮಕ್ಕಳ ಹೆತ್ತವರು ಸಮರ್ಪಕವಾಗಿ ಬಳಸಬೇಕು ಎಂದು ಕರೆನೀಡಿದರು. ಕನ್ನಡ ವಿದ್ಯಾರ್ಥಿಗಳ ಕಾಳಜಿಯ ದೃಷ್ಟಿಯಲ್ಲಿ ಹೊರತರಲಾದ ಜ್ಞಾನ ದೀವಿಗೆ ಸೇವಾ ತತ್ಪರ ಮಾರ್ಗದರ್ಶಿ ಸಂಪನ್ಮೂಲ ವ್ಯಕ್ತಿಗಳ ಪರಿಶ್ರಮದ ಫಲ ಎಮದು ಶ್ಲಾಘಿಸಿದರು.
ನಿವೃತ್ತ ಹಿರಿಯ ಶಿಕ್ಷಕ ಗೋಪಾಲಕೃಷ್ಣ ಭಟ್ ಮುಳ್ಳೇರಿಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಕ್ಷರ ಧಾಮ ಫೌಂಡೇಶನ್‍ನ ಚಂದ್ರಶೇಖರ ಪಾರ್ಥಕೊಚ್ಚಿ ಮಾತನಾಡಿ ಕಲಿಕೆ ಮನಸ್ಸಿನ ಆಳಕ್ಕೆ ಇಳಿಯಬೇಕಾದರೆ ಹೆಚ್ಚಿನ ಓದು ಅನಿವಾರ್ಯ. ಅದಕ್ಕೆ ಪೂರಕ ಪರಿಕರಗಳ ಸದುಪಯೋಗವಾಗಬÉೀಕು ಎಂದು ಅವರು ಹೇಳಿದರು.
ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು ಮಾತನಾಡಿ ಕೇರಳದಲ್ಲಿ ಕನ್ನಡದ ಮಕ್ಕಳಿಗಾಗಿ ಮೊತ್ತ ಮೊದಲ ಬಾರಿಗೆ ಇಂತಹಾ ಪುಸ್ತಕವನ್ನು ಹೊರ ತರಲಾಗಿದೆ. ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲಿ ಎಂದು ಹಾರೈಸಿದರು. ಪುರುಷೋತ್ತಮ ಭಟ್ ಮಾತನಾಡಿ ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಪಾಲಿಗೆ ಈ ಜ್ಞಾನ ದೀವಿಗೆಯ ಮೂಲಕ ಹೊಸ ದಿಶೆ ಆರಂಭವಾಗಿದೆ. ಕನ್ನಡದ ಅಭಿಮಾನವನ್ನು ಮಕ್ಕಳಲ್ಲಿ ಬೆಳೆಸಬೇಕು. ಕನ್ನಡಪರ ಸಂಘಟನೆಗಳು ಇಂತಹಾ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು. ಜಯ ಮಣಿಯಂಪಾರೆ, ರಾಜೇಶ್ ಉಪಸ್ಥಿತರಿದ್ದರು.
ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ನಿವೃತ್ತ ಶಿಕ್ಷಕ ಪ್ರಕಾಶ.ಯಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಬಲ್ಲಾಳ್ ವಂದಿಸಿದರು.


