ಬದಿಯಡ್ಕ: ಶಿಕ್ಷಣದ ವ್ಯಾಪ್ತಿ ವಿಶಾಲವಾದುದಾಗಿದ್ದು, ಪಠ್ಯಗಳ ಜೊತೆಗೆ ಭಾರತೀಯ ಪರಂಪರೆ, ಕಲೆಗಳ ಬಗ್ಗೆ ಸ್ಥೂಲವಾದ ಅರಿವು ಸಂಪಾದಿಸುವುದು ಬದುಕಿನ ಸುಲಲಿತತೆಗೆ ಪೂರಕವಾಗಿರುತ್ತದೆ. ಈ ನಿಟ್ಟಿನಲ್ಲಿ ಬಹುಮುಖಿ ಆಯಾಮಗಳಲ್ಲಿ ಗಡಿನಾಡಿನಲ್ಲಿ ತನ್ನದೇ ಕೊಡುಗೆಗಳ ಮೂಲಕ ಮುಂಚೂಣಿಯಲ್ಲಿರುವ ರಂಗಚಿನ್ನಾರಿ ಕಾಸರಗೋಡು ಪ್ರಸ್ತುತ ಹಮ್ಮಿಕೊಂಡಿರುವ ಶಿಕ್ಷಣಕ್ಕಾಗಿ ನೃತ್ಯ ತಕಜಣುತಾ ಸ್ತುತ್ಯರ್ಹ ಕಾರ್ಯಯೋಜನೆಯಾಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ, ಚಿತ್ರ ಕಲಾವಿದ ಬಾಲ ಮಧುರಕಾನನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಂಸ್ಕøತಿಕ, ಸಾಮಾಜಿಕ ಸಂಸ್ಥೆಯಾದ ರಂಗಚಿನ್ನಾರಿಯು ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮ ಶಿಕ್ಷಣಕ್ಕಾಗಿ ನೃತ್ಯ ಸರಣಿ ಕಾರ್ಯಕ್ರಮ ತಕಜಣುತಾದ 9ನೇ ಪ್ರಾತ್ಯಕ್ಷಿಕೆಯನ್ನು ಮಂಗಳವಾರ ಮಧ್ಯಾಹ್ನ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ದೀಪ ಬೆಳಗಿಸಿ ಚಾಲನೆ ನಿಡಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಶೆಯಲ್ಲಿ ಎಲ್ಲಾ ಉತ್ತಮ ವಿಚಾರಗಳನ್ನು ಕಲಿತುಕೊಳ್ಳುವುದರಿಂದ ಜ್ಞಾನದ ವಿಸ್ತಾರತೆ ಹೆಚ್ಚುತ್ತದೆ. ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳ ಆಸಕ್ತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾದಾಗ ಬದುಕು ಸುಂದರವಾಗುತ್ತದೆ ಎಂದು ಅವರು ತಿಳಿಸಿದರು. ನೃತ್ಯದ ವಿವಿಧ ಮುದ್ರೆ, ಆಸನ, ಅಭಿನಯ ಗಳೇ ಮೊದಲಾದ ಅಂಗಗಳು ದೇಹ, ಮನಸ್ಸುಗಳ ಸುಸ್ಥಿರತೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳ ನೆನಪು ಶಕ್ತಿ, ಏಕಾಗ್ರತೆಗಳಿಗೆ ನೃತ್ಯಗಳ ಅಭ್ಯಾಸ ಮಹತ್ತರವಾದ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ಕನ್ನಡ ಭಾಷಾ ಅಸ್ಮಿತೆ, ರಂಗ ಶಿಕ್ಷಣ ಸಹಿತ ವಿವಿಧ ಆಯಾಮಗಳಲ್ಲಿ ರಂಗಚಿನ್ನಾರಿಯು ದಶಕಗಳಿಂದ ಆಯೋಜಿಸುತ್ತಿರುವ ಕಾರ್ಯಚಟುವಟಿಕೆಗಳು ಅಪೂರ್ವವಾದವುಗಳು ಎಂದು ತಿಳಿಸಿದರು. ಜನಸಾಮಾನ್ಯರಿಗೆ ನೃತ್ಯಗಳ ಬಗೆಗಿನ ಅಥ್ರ್ಯಸುವಿಕೆಗೆ ಪೂರಕವಾದ ಪೂರ್ವ ಪ್ರಾತ್ಯಕ್ಷಿಕೆ ಪ್ರಸ್ತುತ ಸಾಕಾರವಾಗುತ್ತಿರುವುದು ಹೆಮ್ಮೆ ಮೂಡಿಸಿದೆ ಎಂದು ಶ್ಲಾಘಿಸಿದರು.
ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಕಜಣುತಾ ನೃತ್ಯ ಪ್ರಾತ್ಯಕ್ಷಿಕಾ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಾಲಾ ಹಿರಿಯ ಶಿಕ್ಷಕಿ ವಿನೋದಿನಿ, ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ನೃತ್ಯ ಪ್ರಾತ್ಯಕ್ಷಕೆ ನೀಡುವ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಹಾಗೂ ಭವ್ಯಾ ಪುತ್ತಿಗೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿ, ವಂದಿಸಿದಳು. ಶಿಕ್ಷಕಿ ವಾಣೀ.ಪಿ.ಎಸ್.ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಹಾಗೂ ಭವ್ಯಾ ಪುತ್ತಿಗೆ ಅವರಿಂದ ಭರತನಾಟ್ಯದ ಆಂಗಿಕಾಭಿನಯ, ಹೆಜ್ಜೆಗಾರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಪುರುಷೋತ್ತಮ ಕೊಪ್ಪಲ್ ಸಹಕರಿಸಿದರು.
ಮಂಗಳವಾರ ಬೆಳಿಗ್ಗೆ ಬೇಳ ಸೈಂಟ್ ಮೇರೀಸ್ ಹೈಯರ್ ಸೆಕೆಮಡರಿ ಶಾಲೆ ಮತ್ತು ನಾಯ್ಕಾಪು ಲಿಟಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಕಜಣುತಾದ ಏಳು ಹಾಗೂ ಎಂಟನೇ ಸರಣಿ ನಡೆಯಿತು.



