ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವಾಚನ ಪಕ್ಷಾಚರಣೆಯ ಸಮಾರೋಪ ಸಮಾರಂಭವು ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಸೀತಾಂಗೋಳಿ ಮಾಲಿಕ್ ದಿನಾರ್ ಕಾಲೇಜ್ ಓಫ್ ಗ್ರಾಜ್‍ವೇಟ್ ಸ್ಟಡೀಸ್ ನ ಗ್ರಂಥಪಾಲಕಿ ಪ್ರೇಮಗಂಗಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಓದಿನ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಮಾಹಿತಿಯ ಮೂಲಗಳ ಬಗ್ಗೆ ಪ್ರಸ್ತಾಪಿಸಿ ಸೋಮೇಶ್ವರ ಶತಕದ ಪದ್ಯವನ್ನು ಉದ್ಧರಿಸಿ ಬರವಣಿಗೆ,ಮುದ್ರಿತ ಸಾಹಿತ್ಯ, ಅಂಧರಿಗೆ ಬ್ರೈಲ್ ಲಿಪಿ ಮೊದಲಾದವುಗಳು ಓದುವಿಕೆಯಲ್ಲಿ ಬಳಕೆಯಾಗುತ್ತಿವೆ ಎಂದರು. ಓದಿನ ವಿಧಗಳನ್ನು ಗಟ್ಟಿ ಓದು ಮತ್ತು ಮೌನ ಓದು ಎಂಬುದಾಗಿ ವಿಂಗಡಿಸಬಹುದಾಗಿದೆ ಎಂದರು. ಗ್ರಂಥ ವಿಜ್ಞಾನದ ಪಿತ ಎಸ್.ಆರ್. ರಂಗನಾಥನ್ ಅವರ ಹೆಸರನ್ನು ಉಲ್ಲೇಖಿಸಿ ಅವರ ಕೊಡುಗೆಯನ್ನು ಸ್ಮರಿಸಿದರು.ಓದಿನ ಪ್ರಯೋಜನದ ಕುರಿತು ಹಲವು ವಿಚಾರಗಳನ್ನು ತೆರೆದಿಟ್ಟರು. ಓದುವಿಕೆಯು ಒಂದು ಉತ್ತಮ ಹವ್ಯಾಸ ಎಂದು ಹೇಳಿದರು.
ಏತಡ್ಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿಶೋರ್ ರೈ ಕುಂಡಾಪು ಅವರು ಶುಭಾಶಂಸನೆಗೈದು ಮಾತನಾಡಿದರು. ಗ್ರಂಥಾಲಯವು ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಅನ್ವಿತಾ ಮತ್ತು ಭವ್ಯಶ್ರೀ ಅವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿ ಅವರು ಬಹುಮಾನ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಂಥಾಲಯದ ಅಧ್ಯಕ್ಷ ಕೆ ನರಸಿಂಹ ಭಟ್ ದಿವಂಗತ ಐ ವಿ ದಾಸ್ ಅವರ ಸಂಸ್ಮರಣೆ ಮಾಡಿದರು. ಶಾಲಾ ವಿದ್ಯಾರ್ಥಿನಿಯರಾದ ಅನುಷಾ, ನಿಕ್ಷಿತಾ, ಭವ್ಯಾ, ಮತ್ತು ಶ್ರೀಜಾ ಪ್ರಾರ್ಥನೆ ಹಾಡಿದರು. ಸುಧೀರ್ ಕೃಷ್ಣ ಪಿ ಎಲ್ ಸ್ವಾಗತಿಸಿ, ಕೆ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ವೈ.ಕೆ. ಗಣಪತಿ ಭಟ್ ವಂದಿಸಿದರು.


