ಬದಿಯಡ್ಕ: ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಿತಿ ಸಭೆಯು ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾದ ಪದ್ಮರಾಜ್ ಪಟ್ಟಾಜೆ ಇವರ ಅಧ್ಯಕ್ಷತೆಯಲ್ಲಿ ನೀರ್ಚಾಲು ಮಾರ್ಕೆಟಿಂಗ್ ಸಹಕಾರಿ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.
ಸಹಕಾರ ಭಾರತಿ ರಾಜ್ಯಮಟ್ಟದ ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸಲು ಸಭೆಯು ತೀರ್ಮಾನಿಸಿತು. ಎಲ್ಲಾ ಸಹಕಾರಿಗಳು ಸಹಕಾರ ಭಾರತಿಯ ಸದಸ್ಯತನ ವನ್ನು ಪಡೆದುಕೊಳ್ಳುವಂತೆ ಕೇಳಿಕೊಳ್ಳಲಾಯಿತು. ಸಹಕಾರ ಭಾರತಿಯ ಕಾಸರಗೋಡು ತಾಲೂಕು ಮಟ್ಟದ ಸಮ್ಮೇಳನವನ್ನು ಆ. 11 ರಮದು ಭಾನುವಾರ ಮಧ್ಯಾಹ್ನದ ಬಳಿಕ ಬದಿಯಡ್ಕ ದಲ್ಲಿರುವ ಸಂಸ್ಕೃತಿ ಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು. ತಾಲೂಕು ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಪೆರಡಾಲ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷರಾಗಿಯೂ ತಾಲೂಕು ಅಧ್ಯಕ್ಷರಾದ ಪದ್ಮರಾಜ ಪಟ್ಟಾಜೆ ಕಾರ್ಯದರ್ಶಿಗಳಾಗಿಯೂ ಹಾಗೂ ಸಂಜೀವ ಶೆಟ್ಟಿ, ಸುಬ್ರಮಣ್ಯ ಕಡಂಬಳಿತ್ತಾಯ, ಪ್ರವೀಣ್ ಕೊಡೋತ್ , ಜಯಂತಿ ಕುಂಟಿಕಾನ, ಉದನೇಶ್ವರ, ಶಂಕರಪ್ಪ ಕಾಸರಗೋಡು, ಕಣ್ಣನ್, ಅಪ್ಪಣ್ಣ ಬಂಬ್ರಾಣ, ಹರಿಪ್ರಸಾದ್ ಮಧೂರು, ಶ್ರೀಧರ ಭಟ್ ಕುಂಬ್ಡಾಜೆ, ಸ್ಮಿತಾ ಸರಳಿ ಇವರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ತಾಲೂಕು ಸಮ್ಮೇಳನ ಯಶಸ್ವಿಗೊಳಿಸಲು ಬೇಕಾದ ಕಾರ್ಯಯೋಜನೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ, ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ, ಜಿಲ್ಲಾ ಕೋಶಾಧಿಕಾರಿ ವೇಣುಗೋಪಾಲ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

