ಮುಳ್ಳೇರಿಯ : ಗೋವುಗಳ ಆರೋಗ್ಯ ಅತ್ಯಂತ ಸಂಕೀರ್ಣವಾಗಿದ್ದು, ಅವುಗಳ ಆಹಾರ ಕ್ರಮ ಶಿಸ್ತಿನಿಂದ ಇರಬೇಕು. ಬೇಕಾಬಿಟ್ಟಿಯಾಗಿ ಆಹಾರ ನೀಡುವುದರಿಂದ ಅಜೀರ್ಣದಂತಹಾ ಸಮಸ್ಯೆಗಳಿಂದ ಅವುಗಳ ಆರೋಗ್ಯ ಕೆಡುವ ಸಾಧ್ಯತೆ ಇದೆ. ಇದೀಗ ಚಾಲ್ತಿಯಲ್ಲಿರುವ ಗೋಸಮೃದ್ಧಿ ಪ್ಲಸ್ ವಿಮೆ ವ್ಯವಸ್ಥೆ ಅತ್ಯುತ್ತಮವಾಗಿದ್ದು, ನಬಾರ್ಡ್ ಸಹಕಾರದಲ್ಲಿ ಇನ್ನೂ ಅನೇಕ ಯೋಜನೆಗಳು ಅನುಷ್ಠಾನಗೊಂಡಿವೆ. ಅವುಗಳ ಮಾಹಿತಿಯು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಲಭ್ಯವಿದೆ ಎಂದು ಕಾಸರಗೋಡು ಜಿಲ್ಲಾ ಪಶು ಆರೋಗ್ಯ ಘಟಕದ ಹಿರಿಯ ಪಶು ವೈದ್ಯಾಧಿಕಾರಿ ಡಾ. ನಾಗರಾಜ್ ಹೇಳಿದರು.
ಅವರು ಭಾನುವಾರ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ನಡೆದ 'ಮಳೆಗಾಲದಲ್ಲಿ ದನಗಳ ಆರೋಗ್ಯ ಆರೈಕೆ ಹಾಗೂ ಹೈನುಗಾರರಿಗೆ ದೊರೆಯುವ ಸರ್ಕಾರಿ ಸವವತ್ತುಗಳು' ಎಂಬ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದರು.
'ಹಸುಗಳ ಶರೀರದಲ್ಲಿ ಏಕಜೀವಕೋಶಗಳು ನಾಶವಾಗದಂತೆ ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕು. ಈ ಕೋಶಗಳು ನಾಶವಾದರೆ ಬ್ಯಾಕ್ಟೀರಿಯಾಗಳು ದನದ ಶರೀರವನ್ನು ಪ್ರವೇಶಿಸಿ, ರೋಗಕಾರಕವಾಗುತ್ತವೆ. ಹೆಣ್ಣು ಕರುವಿಗೆ ಪೋಷಕಾಂಶ ನೀಡುವ ಉದ್ದೇಶದಿಂದ ಗೋವರ್ಧಿನಿ ಎಂಬ ಯೋಜನೆಯೂ ಚಾಲ್ತಿಯಲ್ಲಿದೆ. ಹಟ್ಟಿಯಿಂದ ಮಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಹಟ್ಟಿಯನ್ನು ನಿರ್ಮಿಸಬೇಕು. ಇದರಿಂದ ದನಗಳ ಕೆಚ್ಚಲು ರೋಗ, ಗೊರಸು ರೋಗವನ್ನು ನಿಯಂತ್ರಿಸಬಹುದು. ದನಗಳ ಹಟ್ಟಿಯ ಪರಿಸರದಲ್ಲಿ ಇತರ ಸಾಕುಪ್ರಾಣಿಗಳನ್ನು ಕಟ್ಟಬಾರದು. ಇದರಿಂದ ಅನೇಕ ರೋಗಗಳು ದನಗಳಿಗೆ ಹರಡುವ ಸಾಧ್ಯತೆ ಇದೆ. ಆರೋಗ್ಯ ಕೆಟ್ಟಾಗ ದನಗಳ ಹೊಟ್ಟೆ ಉಬ್ಬರಿಸಿದಂತಾಗಿ, ಮೆಲುಕು ಹಾಕುವುದನ್ನು ನಿಲ್ಲಿಸಿ ದನಗಳು ಮಲಗುತ್ತವೆ. ಆಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ವರು ಸಮಗ್ರ ಮಾಹಿತಿ ನೀಡಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ, ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜತೆ ಕಾರ್ಯದರ್ಶಿ ಪ್ರಕಾಶ್ ಪಾಂಙಣ್ಣಾಯ ಮೊದಲಾದವರು ಭಾಗವಹಿಸಿದ್ದರು. ನಂತರ ನಡೆದ ಸಂವಾದದಲ್ಲಿ ಶಿವಳ್ಳಿ ಸಮುದಾಯದ ಅನೇಕ ಮಂದಿ ಹೈನುಗಾರರ ಸಮಸ್ಯೆಗಳಿಗೆ ಡಾ. ನಾಗರಾಜ್ ಅವರು ಸೂಕ್ತ ಪರಿಹಾರ ನೀಡಿ, ದನಗಳಿಗೆ ನೀಡಬಹುದಾದ ಅನೇಕ ತುರ್ತು ಚಿಕಿತ್ಸೆಗಳ ಮಾಹಿತಿ ನೀಡಿದರು. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಪ್ರಶಾಂತ ರಾಜ್ ವಿ ತಂತ್ರಿ ಸ್ವಾಗತಿಸಿ, ಮಾಲೆಂಕಿ ಅನಂತರಾಮ ಕಡಂಬಳಿತ್ತಾಯ ವಂದಿಸಿದರು.


