ಕಾಸರಗೋಡು: ಕನ್ನಡ ನಾಡಿನ ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನದ ಉಳಿವು ಮತ್ತು ಬೆಳವಣಿಗೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಕೊಡುಗೆ ಅಪಾರ. ಈ ಕಲೆಯನ್ನು ಅಭಿರುಚಿ ಮತ್ತು ಆಸಕ್ತಿ ಮೂಡಿಸಲು ಪ್ರತಿಷ್ಠಾನವು ಆಯೋಜಿಸುತ್ತಿರುವ ಯೋಜನೆಗಳು ಅತ್ಯಂತ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ನುಡಿದರು.
ಶ್ರೀ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿರಿಬಾಗಿಲು ಸಾಂಸ್ಕøತಿಕ ಭವನ ನಿರ್ಮಾಣ ಯೋಜನೆಯ ಮನವಿ ಪತ್ರ ಬಿಡುಗಡೆಗೊಳಿಸಿ ಅವರು ಶುಭಹಾರೈಸಿದರು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಯಕ್ಷಗಾನವು ಶಾಸ್ತ್ರೀಯ ರೂಪ ಪಡೆದು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಧಾರ್ಮಿಕ, ಸಾಂಸ್ಕøಕ ಭವನ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ವಿಷಯ. ಹೊಸ ತಲೆಮಾರಿಗೆ ಯಕ್ಷಗಾನದ ಸರ್ವಾಂಗಗಳನ್ನೂ ತಿಳಿಯಪಡಿಸುವ ಒಂದು ಕೇಂದ್ರವಾಗಿ ಇದು ರೂಪುಗೊಳ್ಳಬೇಕಾಗಿದೆ. ಧರ್ಮಸ್ಥಳ ಮೇಳದ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ನೇತೃತ್ವದಲ್ಲಿ ಈ ಯೋಜನೆ ಸಾಕಾರಗೊಳ್ಳಲು ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಡಾ.ಹೆಗ್ಗಡೆ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿದ ಪೂರ್ವಾಧ್ಯಕ್ಷ, ಧಾರ್ಮಿಕ ಮುಂದಾಳು ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದರು. ಯಕ್ಷಗಾನ ಕುಲಪತಿ ಪಾರ್ತಿಸುಬ್ಬನ ನಾಡಿನಲ್ಲಿ ಯಕ್ಷಗಾನದ ಮೂಲಕ ಕನ್ನಡ ಭಾಷೆ, ಸಂಸ್ಕøತಿ ಜೀವಂತವಾಗಿದೆ. ಈ ಕಲೆಯನ್ನು ಬೆಳೆಸಲು ಕಲಾಹೃದಯಿಗಳಾದ ಕನ್ನಡಿಗರೆಲ್ಲರೂ ಪ್ರಯತ್ನಿಸಬೇಕು. ಬಹುಮುಖ ಪ್ರತಿಭೆಯ ಸಾಹಿತಿ, ಸಂಶೋಧಕ ವೆಂಕಪ್ಪಯ್ಯ ಅವರು ಉಸಿರಾಡಿದ ನೆಲದಲ್ಲಿ ಸದಾ ಯಕ್ಷಗಾನ ಅನುರಣಿಸಬೇಕು. ಸಾಂಸ್ಕøತಿಕ ಭವನದ ಮೂಲಕ ಈ ಕೆಲಸ ನಡೆಯಲಿ ಎಂದು ಪುನರೂರು ಆಶಿಸಿದರು.
ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀನಾರಾಯಣ ಕಾವುಮಠ ಸ್ವಾಗತಿಸಿದರು. ಉಜ್ರೆ ಅಶೋಕ ಭಟ್, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಪೆರ್ವಡಿ ಸುಬ್ರಹ್ಮಣ್ಯ ಭಟ್, ಜಯರಾಮ ಕಾರಂತ ದೇಶಮಂಗಲ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉದಯ ಕಂಬಾರ್, ಜಯರಾಮ ರೈ ಸಿರಿಬಾಗಿಲು ಉಪಸ್ಥಿತರಿದ್ದರು.
ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿದ ರಾಧಾಕೃಷ್ಣ ಕೆ.ಉಳಿಯತ್ತಡ್ಕ ರಚಿಸಿದ `ಸಿರಿಬಾಗಿಲು ವೆಂಕಪ್ಪಯ್ಯ' ಕೃತಿಯನ್ನು ಡಾ|ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ನೀಡಲಾಯಿತು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

