ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ನಿಲುವನ್ನು ಬೆಂಬಲಿಸಿದ ನೆಪದಲ್ಲಿ ಎಡರಂಗ ಮತ್ತು ಐಕ್ಯರಂಗದಿಂದ ಹೊರಹಾಕಿದ ನನಗೆ ಬಿಜೆಪಿ ಪ್ರವೇಶ ರಾಜಕೀಯ ಜೀವನದ ಪುನರ್ಜನ್ಮ ಎಂದು ಮಾಜಿ ಸಂಸದ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಹೇಳಿದರು.
ಅಲ್ಪಸಂಖ್ಯಾತ ಮೋರ್ಚಾ ಕಾಸರಗೋಡು ಜಿಲ್ಲಾ ಸದಸ್ಯತ್ವ ವಿತರಣೆ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಜನ್ಮದ ಪುಣ್ಯದಿಂದಲೇ ವಿಶ್ವದ ಅತ್ಯಂತ ಬೃಹತ್ ಪ್ರಜಾತಂತ್ರ ಪಕ್ಷವಾದ ಬಿಜೆಪಿ ತನ್ನನ್ನು ಸ್ವೀಕರಿಸಿದೆ. ಏಕಾತ್ಮತಾ ಮಾನವ ದರ್ಶನ, ರಾಮರಾಜ್ಯ ಕಲ್ಪನೆ ಮತ್ತು ಗಾಂ„ ದರ್ಶನವು ಬಿಜೆಪಿಯ ಧ್ಯೇಯವಾಗಿದೆ. ಇತ್ತೀಚೆಗೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮುಂಗಡಪತ್ರದಲ್ಲಿ ಕುಟುಂಬಶ್ರೀಗೆ ಹೆಚ್ಚಿನ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಕೇಂದ್ರದ ಬಿಜೆಪಿ ಸರಕಾರ ಬಡವರ ಪರ ಎಂಬುದು ಸಾಬೀತುಗೊಂಡಿದೆ. ಬಿಜೆಪಿ ಅಲ್ಪಸಂಖ್ಯಾತ ಸಮುದಾಯಗಳ ವಿರೋ„ ಎಂಬುದಾಗಿ ಅಪಪ್ರಚಾರ ನಡೆಸಿ ಗುಲ್ಲೆಬ್ಬಿಸಲಾಗುತ್ತಿದೆ. ಆದರೆ ಭಾರತದಲ್ಲಿ ಬಿಜೆಪಿ ಆಡಳಿತದಲ್ಲಿ ಕೋಮು ಗಲಭೆಗಳು ನಡೆಯದಿರುವುದು ಗಮನಾರ್ಹ ವಿಷಯವಾಗಿದೆ. ಎಡರಂಗ-ಐಕ್ಯರಂಗದ ಅಪಪ್ರಚಾರದಿಂದಾಗಿ ಅಲ್ಪಸಂಖ್ಯಾತರನ್ನು ಬಿಜೆಪಿಯಿಂದ ದೂರ ಸರಿಯುವಂತೆ ಮಾಡಿದೆ ಎಂದ ಅವರು ಇದೀಗ ಕೇರಳದಲ್ಲೂ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದೆ. ಕೇರಳವು ಅಭಿವೃದ್ಧಿ ಹೊಂದಬೇಕಾದರೆ ಆಡಳಿತದಲ್ಲಿ ಬದಲಾವಣೆ ಆಗಲೇಬೇಕು. ಗುಜರಾತ್‍ನಲ್ಲಿ ಒಬ್ಬನೇ ಒಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿಲ್ಲ. ಗುಜರಾತ್ ಉದ್ಯಮಿಗಳನ್ನು ಸ್ವಾಗತಿಸುವ ರಾಜ್ಯವಾಗಿದೆ ಎಂದು ಅಬ್ದುಲ್ಲ ಕುಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಜೋಯಿ, ಪಿ.ಎಫ್.ಸೆಬಾಸ್ಟಿನ್, ಎ.ಯು.ಮತ್ತಾಯಿ, ಬೇಬಿ ಮ್ಯಾಥ್ಯೂ, ಇಬ್ರಾಹಿಂ ಮೊದಲಾದವರನ್ನು ಶಾಲು ಹೊದಿಸಿ ಅಬ್ದುಲ್ಲ ಕುಟ್ಟಿ ಪಕ್ಷಕ್ಕೆ ಬರಮಾಡಿಕೊಂಡರು.
ಅಲ್ಪಸಂಖ್ಯಾತ ಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ವಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್, ಸಮಿತಿ ಸದಸ್ಯರಾದ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಮೊದಲಾದವರು ಶುಭಹಾರೈಸಿದರು.
ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಡ್ಯಾನಿಯಲ್ ಸ್ವಾಗತಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಅಬ್ದುಲ್ಲ ವಂದಿಸಿದರು.

