ಪೆರ್ಲ: ಜಿಲ್ಲೆಯ ಕೆಲವು ಶಾಲೆಗಳಲ್ಲಿ ರ್ಯಾಗಿಂಗ್ ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲಾ ಕಾಲೇಜು ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ಹೊಣೆಗಾರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣಾಧಿಕಾರಿ ನೇತೃತ್ವದಲ್ಲಿ ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ ರ್ಯಾಗಿಂಗ್ ವಿರುದ್ಧ ಸಮಿತಿ ರಚಿಸಲಾಯಿತು.
ಸಂಚಾಲಕರಾಗಿ ಶಾಲಾ ಪ್ರಾಂಶುಪಾಲ, ಸದಸ್ಯರಾಗಿ ಬದಿಯಡ್ಕ ಠಾಣೆ ಪೊಲೀಸ್ ಅಧಿಕಾರಿ ಮಧುಸೂದನ್, ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ, ಶಾಲಾ ಮುಖ್ಯ ಶಿಕ್ಷಕ, ಶಿಕ್ಷಕಿ ಉಷಾ ಕುಮಾರಿ, ಪ್ರತಿ ತರಗತಿಯ ಓರ್ವ ವಿದ್ಯಾರ್ಥಿ ಪ್ರತಿನಿಧಿ ಒಳಗೊಂಡ ರ್ಯಾಗಿಂಗ್ ವಿರುದ್ಧ ಸಮಿತಿ ರಚಿಸಲಾಯಿತು.
ಬದಿಯಡ್ಕ ಠಾಣಾಧಿಕಾರಿ ಅನೀಶ್ ರ್ಯಾಗಿಂಗ್ ವಿರುದ್ಧ ಕಾರ್ಯಾಚರಣೆಯ ಮಾಹಿತಿ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಯತೀಂದ್ರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಪ್ರಾಂಶುಪಾಲ ಗಂಗಾಧರ ಕೆ.ಸ್ವಾಗತಿಸಿ, ಮುಖ್ಯ ಶಿಕ್ಷಕ ವಾಸುದೇವ ನಾಯಕ್ ವಂದಿಸಿದರು.


