ಕಾಸರಗೋಡು: ಭಾಷಾ ಅಲ್ಪ ಸಂಖ್ಯಾತ ಸಮಿತಿ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಪ್ರಭಾರ ಹೆಚ್ಚುವರಿ ದಂಡನಾಧಿಕಾರಿ ಪಿ.ಆರ್.ರಾಧಿಕಾ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಕನ್ನಡಿಗರ ಅನೇಕ ಸಮಸ್ಯೆಗಳನ್ನು ಚರ್ಚಿಸಲಾಯಿತು. ಆಯಾ ವಿಷಯಗಳಿಗೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು 15 ದಿನಗಳೊಂಗೆ ಉತ್ತರ ನೀಡಬೇಕು. ಅದರ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಧ್ಯಕ್ಷೆ ತಿಳಿಸಿದರು.
ಸಂಸದ, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಭೆಯಲ್ಲಿ ಗೈರುಹಾಜರಾದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಮತ್ತು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ ರವೀಂದ್ರನಾಥ್ ಬಲ್ಲಾಳ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ವಿಧಾನಸಭೆ ಕಲಾಪ ಶುಕ್ರವಾರದ ವರೆಗೂ ನಡೆದ ಹಿನ್ನೆಲೆಯಲ್ಲಿ, ಶಾಕರೆಲ್ಲರೂ ಶನಿವಾರವಷ್ಟೇ ತಿರುವನಂತುರಂನಿಂದ ಹೊರಟಿರುವ ಕಾರಣ ಸಭೆಗೆ ಗೈರುಹಾಜರಾಗಿರಬುಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಸಭೆಯನ್ನು ಜನಪ್ರತಿನಿಧಿಗಳ ಸಮಯಾವಕಾಶ ಕೇಳಿಯೇ ನಿರ್ಧರಿಸಲಾಗುವುದು ಎಂದವರು ನುಡಿದರು.
ಮೂರು ತಿಂಗಳಿಗೊಮ್ಮೆ ಸೇರಬೇಕಾದ ಸಭೆ ಈ ಬಾರಿ ಲೋಕಸಭೆ ಚುನಾವಣೆ ಸಹಿತ ಕಾರಣಗಳಿಂದ 6 ತಿಂಗಳು ಕಳೆದು ನಡೆದಿತ್ತು ಎಂದು ಅಧ್ಯಕ್ಷೆ ತಿಳಿಸಿದರು. ಶಿಕ್ಷಣ ಇಲಾಖೆಗೆ ಸಂಬಂಧಿಸಿ ಖಾದರ್ ಸಮಿತಿ ವರದಿ ಜಾರಿವೇಳೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಬೇಕು, ಕೆ.ಎಸ್.ಆರ್.ಟಿ.ಸಿ. ಸಹಿತ ಬಸ್ ನಿಲ್ದಾಣಗಳಲ್ಲಿ ಕನ್ನಡದಲ್ಲಿ ಫಲಕ ಸ್ಥಾಪಿಸಬೇಕು, ಮಾಯಿಪ್ಪಾಡಿ ಡಯಟ್ ಸಂಸ್ಥೆಯಲ್ಲಿ ಕನ್ನಡ ಶಿಕ್ಷಕರನ್ನು ಶೀಘ್ರದಲ್ಲೇ ನೇಮಿಸಬೇಕು, ಯು.ಪಿ.ಎಸ್.ಇ. ಕನ್ನಡ ಶಿಕ್ಷಕ ಹುದ್ದೆಯನ್ನು ಕೇವಲ ಕನ್ನಡ ಭಾಷಾ ಅಧ್ಯಾಪಕ ಹುದ್ದೆ ಎಂದು ಪರಿಶೀಲಿಸಿರುವುದನ್ನು ಬದಲಿಸಿ, ಕನ್ನಡ ಮಾಧ್ಯಮದ ಉಳಿದ ವಿಷಯಗಳ ಅಧ್ಯಾಪಕರ ನೇಮಕ ನಡೆಸಬೇಕು ಇತ್ಯಾದಿ ವಿಷಯಗಳ ಬಗ್ಗೆ ಕನ್ನಡಿಗರ ಪ್ರತಿನಿಧಿಗಳು ಬೆಳಕು ಚೆಲ್ಲಿದರು.
ಈ ವಿಚಾರಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಪರಿಹಾರ ಒದಗಿಸುವಂತೆ ಅಧ್ಯಕ್ಷೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದರು. ಕಂದಾಯ ಇಲಾಖೆ ಸಿಬ್ಬಂದಿ ಸುರೇಶ್ ಮಣಿಯಾಣಿ, ವಿವಿಧ ಇಲಾಖೆಗಳ ಪ್ರತಿನಿಧಿಗಳು, ಸಿಬ್ಬಂದಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

