HEALTH TIPS

ದೇವರಕೆರೆಯಲ್ಲಿ ಮಳೆ-ಬೆಳೆ ಮಹೋತ್ಸವ-ಪಾರಂಪರಿಕ ಕೃಷಿ ಬದುಕು ನೆಮ್ಮದಿ ನೀಡುವುದು: ಕೆ.ಎನ್.ಕೃಷ್ಣ ಭಟ್


        ಬದಿಯಡ್ಕ: ಭಾರತೀಯ ಮೂಲ ಕೃಷಿ ಪರಂಪರೆಯನ್ನು ಉಳಿಸುವ, ಪ್ರಕೃತಿಯನ್ನು ಸಂರಕ್ಷಿಸುವ ಅಂತರಂಗವನ್ನು ಮೈಗುಡಿಸಬೇಕಾದ ಅನಿವಾರ್ಯತೆ ಇಂದಿದೆ. ಬದುಕನ್ನು ಸುಗಮವಾಗಿ ಮುನ್ನಡೆಸಲು ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದ್ದು, ಕೃಷಿ ಮರೆತ ಮಾನವ ಬದುಕು ದುರಂತವನ್ನು ಅನುಭವಿಸುತ್ತದೆ ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ತಿಳಿಸಿದರು.
    ಬದಿಯಡ್ಕ ಗ್ರಾಮ ಪಂಚಾಯತಿ ಮತ್ತು ಕುಟುಂಬಶ್ರೀ ಸಿಡಿಎಸ್ ಸಂಯುಕ್ತ ಆಶ್ರಯದಲ್ಲಿ ಕುಟುಂಬಶ್ರೀಯ ಭತ್ತ ಬೆಳೆ, ಜಲಸಂರಕ್ಷಣಾ ಯಜ್ಞ 2019ರ ಅಂಗವಾಗಿ ನೀರ್ಚಾಲು ಸಮೀಪದ ಮಾನ್ಯ ದೇವರಕೆರೆ ಕೃಷಿ ಕೂಟ ಸಮಿತಿಯ ಸಹಕಾರದೊಂದಿಗೆ ಶನಿವಾರ ಆಯೋಜಿಸಲಾದ "ಮಳೆ-ಬೆಳೆ ಮಹೋತ್ಸವ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ತುಳುನಾಡಿನ ಸಂಸ್ಕøತಿ-ಜನಜೀವನವು ಕೃಷಿ ಜಗತ್ತಿನೊಂದಿಗೆ ಸಮ್ಮಿಳಿತವಾದ ಅಪೂರ್ವ ವ್ಯವಸ್ಥೆಯಾಗಿ ಸಹಕಾರ-ಸಹಬಾಳ್ವೆಯೊಂದಿಗೆ ಬೆಳೆದುಬಂದುದಾಗಿದೆ. ಓ..ಬೇಲೆ, ಸಂದಿ-ಪಾಡ್ದನಗಳ ಜಾನಪದೀಯ ಬೇರುಗಳನ್ನು ತನ್ನೊಡಲೊಳಗೆ ಬೆಳೆಸುತ್ತಾ ಸ್ವಾವಲಂಬಿಯಾದ ಸಾಮಾಜಿಕ ವ್ಯವಸ್ಥೆಯೊಂದು ಪೂರ್ವಜರ ಪರಿಶ್ರಮದ ಫಲವಾಗಿ ರೂಪುಗೊಂಡಿತ್ತು. ಆದರೆ ಆಧುನಿಕತೆಯ ವೇಗದಲ್ಲಿ ಸಾಗಿಬಂದದಾರಿಯನ್ನು ಮರೆತಿರುವ ನಾವು ಸಕಲವನ್ನೂ ಕಳಕೊಂಡು ಬೆತ್ತಲಾಗಿರುವ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದವರು, ಯುವ ಸಮೂಹವನ್ನು ಭತ್ತ ಸಹಿತ ಪಾರಂಪರಿಕ ಕೃಷಿಯತ್ತ ಆಕರ್ಷಿಸುವ ಪರಿಕಲ್ಪನೆಯಲ್ಲಿ ಮಳೆ-ಬೆಳೆ ಮಹೋತ್ಸವ ಯಶಸ್ವಿಯಾಗಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
    ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಝೈಬುನ್ನೀಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮ ವ್ಯಾಪಕಗೊಳ್ಳಲಿ ಎಂದು ತಿಳಿಸಿದರು.
   ಕಾಸರಗೋಡು ಬ್ಲಾಕ್ ಪಂಚಾಯತಿ ವಿದ್ಯಾಭ್ಯಾಸ-ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ  ಟಿ.ಎಸ್.ಅಹಮ್ಮದ್, ಬದಿಯಡ್ಕ ಗ್ರಾಮ ಪಂಚಾಯತಿ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷನ್ವರ ಓಸೋನ್, ಕ್ಷೇಮಕಾರ್ಯಸ್ಥಾಯಿ ಸಮಿತಿ ಅಧ್ಯಕ್ಷ ಶಬಾನ, ಸದಸ್ಯರಾದ ಮುನೀರ್, ಮುಹಮ್ಮದ್ ಸಿರಾಜ್, ರಾಜೇಶ್ವರಿ, ಗ್ರಾ.ಪಂ. ಸಹಾಯಕ ಕಾರ್ಯದರ್ಶಿ ಸುನಿಲ್ ಕುಮಾರ್ ಎಸ್., ಗ್ರಾ.ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಮಾಜೀ ಅಧ್ಯಕ್ಷೆ ಸವಿತಾ ಎಂ.ಪಿ., ಎಡಿಸಿ ಸಮಿತಿ ಸದಸ್ಯ ಖಾದರ್ ಮಾನ್ಯ, ಕುಟುಂಬಶ್ರೀ ಎಡಿಎಸ್ ಕಾರ್ಯದರ್ಶಿ ಸರೋಜಿಸಿ, ಬದಿಯಡ್ಕ ಗ್ರಾಮ ಪಂಚಾಯತಿ ಕೃಷಿ ಅಧಿಕಾರಿ ಮೀರಾ, ಪ್ರಸನ್ನ, ಎಂ.ಎಚ್.ಜನಾರ್ದನ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
     ಸಮಾರಂಭದಲ್ಲಿ ಪ್ರಗತಿಪರ ಕೃಷಿಕರಾದ ಧರ್ಮಪಾಲ ಮಾನ್ಯ, ಪರಮೇಶ್ವರಿ ಮೇಗಿನಡ್ಕ, ಬೆಂಜಮಿನ್ ಡಿಸೋಜಾ ಕಾರ್ಮಾರು, ಪಿ.ಕೆ.ಶಾಫಿ ಮಾನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಮಳೆ-ಬೆಳೆ ಮಹೋತ್ಸವದ ವ್ಯವಸ್ಥೆಗೆ ಕಾರಣರಾದ ಮಾಜೀ ಸೈನಿಕ ಕೃಷ್ಣ ನಾಯ್ಕ ದೇವರಕೆರೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಬದಿಯಡ್ಕ ಗ್ರಾ.ಪಂ. ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸುಧಾ ಜಯರಾಂ ವಂದಿಸಿದರು. ಗ್ರಾ.ಪಂ. ಕಿರಿಯ ಗುಮಾಸ್ತ ಬಾಬು ಕಾರ್ಯಕ್ರಮ ನಿರೂಪಿಸಿದರು.
      ಬಳಿಕ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗೆ ಕಾಲ್ಚೆಂಡು, ಕಬ್ಬಡಿ, ಹಗ್ಗಜಗ್ಗಾಟ, ಜಾನಪದ ಹಾಡು, ನೇಜಿ ನೆಡುವುದು ಮತ್ತು ಮಕ್ಕಳಿಗಾಗಿ ಕಬ್ಬಡಿ, ಹಗ್ಗಜಗ್ಗಾಟ, 100 ಮೀಟರ್ ರಿಲೇ ಓಟದ ಸ್ಪರ್ಧೆಗಳು ಕೆಸರು ತುಂಬಿದ ಗದ್ದೆ ಬಯಲಲ್ಲಿ ಉತ್ಸಾಹದಿಂದ ನಡೆಯಿತು. ಸ್ಥಳೀಯ ನೂರಾರು ಮಂದಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries