HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-06-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ

       .
1. ಸದೃಢ ಅಲ್ಲ ಸುದೃಢ ಆಗಿರಬೇಕು.
"ಸದೃಢ ಆರೋಗ್ಯಕ್ಕಾಗಿ ಯೋಗಾಸನ ಮಾಡಬೇಕು" : ವಿಜಯವಾಣಿ

"ಸದೃಢ ದೇಶಕ್ಕೆ ಯೋಗ್ಯರ ಆಯ್ಕೆ ಮಾಡಿ" : ಪ್ರಜಾವಾಣಿ

"ಸದೃಢ ಮಕ್ಕಳಿಂದ ಸದೃಢ ದೇಶ ನಿರ್ಮಾಣ ಸಾಧ್ಯ" : ವಿಜಯಕರ್ನಾಟಕ

"ಸದೃಢ ರಾಷ್ಟ್ರನಿರ್ಮಾಣಕ್ಕೆ ಎನ್‍ಎಸ್‍ಎಸ್ ಸಹಕಾರಿ" : ಉದಯವಾಣಿ

"ಸದೃಢ ದೇಹ ಸಾಮಥ್ರ್ಯವಿದ್ದಾಗ ಸುಮ್ಮನೆ ಕೂರಬೇಡಿ" : ಕನ್ನಡಪ್ರಭ

"ಸದೃಢ ಬದುಕಿಗೆ ಸಿದ್ಧಸೂತ್ರಗಳು" : ವಿಶ್ವವಾಣಿ
      ಅಂದರೆ, ಕನ್ನಡದ ಪ್ರಮುಖ ದಿನಪತ್ರಿಕೆಗಳೆಲ್ಲವೂ ಈ ತಪ್ಪನ್ನು ಮಾಡುತ್ತಲೇ ಇವೆ ಅಂತಾಯ್ತು. ಅದು, ಸದೃಢ ಅಲ್ಲ, ಸುದೃಢ ಆಗಬೇಕು. ಏಕೆಂದು ನೀವೇ ಆಲೋಚಿಸಿ ನೋಡಿ. ದೃಢ ಎಂದರೆ ಗಟ್ಟಿಯಾದ, ಭದ್ರವಾದ, ಸ್ಥಿರವಾದ ಎಂದು ಅರ್ಥ. ದೃಢ ಎನ್ನುವುದು ಒಂದು ವಿಶೇಷಣ ಪದ ((adjective)). ಸಂಸ್ಕೃತದಲ್ಲಿ ಮತ್ತು ಸಂಸ್ಕೃತಮೂಲದ ಕನ್ನಡ ಪದಗಳಲ್ಲಿ ಸ prefix ಸೇರಿಸುವುದು ವಿಶೇಷಣಪದದೊಟ್ಟಿಗೆ ಅಲ್ಲ, ನಾಮಪದದೊಟ್ಟಿಗೆ.ಸ ಎಂಬುದರ ಅರ್ಥವೇ ಇಂಥದರೊಂದಿಗೆ, ಇಂಥದರ ಜತೆಗೆ ಎಂದು. ಇಂಗ್ಲಿಷ್‍ನ  with  ಇದ್ದಂತೆ. ಹಾಗಾಗಿ ಸಕುಟುಂಬ, ಸಪರಿವಾರ, ಸಸ್ನೇಹ, ಸಬಲ ಮುಂತಾದ ಪದಗಳು ಅರ್ಥಬದ್ಧವೆನಿಸುತ್ತವೆ. ಸು  prefix ಹಾಗಲ್ಲ. ಅದನ್ನು ವಿಶೇಷಣಪದದೊಟ್ಟಿಗೂ ಬಳಸಬಹುದು. ಸು ಎಂದರೆ ಒಳ್ಳೆಯ ಎಂದು. ಒಳ್ಳೆಯ ಗಟ್ಟಿಮುಟ್ಟಾದ ಎನ್ನಲಿಕ್ಕೆ ಸುದೃಢ ಎನ್ನಬೇಕು. ಇನ್ನೂ ಮನದಟ್ಟಾಗಿಲ್ವಾ? ನೀವು ಸಸ್ಥಿರ ಎಂದು ಬರೆಯುವುದಿಲ್ಲ/ಹೇಳುವುದಿಲ್ಲ ಸುಸ್ಥಿರ ಎಂದು ಬರೆಯುತ್ತೀರಿ/ಹೇಳುತ್ತೀರಿ ಅಲ್ಲವೇ? ಹಾಗೆಯೇ, ಸಭದ್ರ ಅನ್ನೋದಿಲ್ಲ ಸುಭದ್ರ ಎನ್ನುತ್ತೀರಿ. ಮತ್ತೆ ದೃಢಕ್ಕೆ ಮಾತ್ರ ಯಾಕೆ ಸ? ಅದು ಸು ಆಗಬೇಕು. ಆಗ ಭಾಷೆಯ ಮೇಲೆ ನಿಮ್ಮ ಪ್ರಭುತ್ವ ಸುದೃಢ ಆಗುತ್ತದೆ.
    ಕೊಸರು: ಸ್ವಾಗತ ಎಂದರೇನೇ ಸು+ಆಗತ (ಒಳ್ಳೆಯದಾಗಿ ಬನ್ನಿ,  welcome)  ಎಂದು. ಸ್ವಾಗತ ಸಾಕು, ಸುಸ್ವಾಗತ ಎನ್ನಬೇಕಿಲ್ಲ. ಸುಸ್ವಾಗತ ಎಂದರೆ ಸು+ಸು+ಆಗತ. welwelcome?

====

          2. ಪತ್ರವನ್ನು ಮುಗಿಸುವಾಗ *ಇತಿ*, ಅಥವಾ *ಇಂತೀ* ಎಂದು ಬರೆಯಬಹುದು.
     ಇತೀ, ಇಂತಿ - ಇವೆಲ್ಲ ತಪ್ಪು, ಅಸಂಬದ್ಧ ಪದಪ್ರಯೋಗಗಳು.
     *ಇತಿ* ಎನ್ನುವುದು ಸಂಸ್ಕೃತದ ಪದ. ಆ ಭಾಷೆಯಲ್ಲಿ *ಅಥ* ಎನ್ನುವುದು opening bracket ಮತ್ತು *ಇತಿ* ಎನ್ನುವುದು  closing bracket ಇದ್ದಹಾಗೆ. ಇತಿಮಿತಿ, ಇತಿಶ್ರೀ ಮುಂತಾದುವನ್ನು ನೆನಪಿಸಿಕೊಳ್ಳಿ.
     *ಇಂತೀ* ಎನ್ನುವುದು ಕನ್ನಡದ *ಇಂತು + ಈ = ಇಂತೀ" ಎಂದು ಲೋಪಸಂಧಿಯಿಂದಾದ ಪದ. ಇಂತು ಎಂದರೆ ಹೀಗೆ. ಹಳೆಯ ಕಾಲದ ಕೆಲವರು ಪತ್ರ ಮುಗಿಸುವಾಗ *ಇಂತು* ಎಂದೇ ಬರೆಯುತ್ತಿದ್ದರು. *ಇಂತು*ಗೆ ಈ ಸೇರಿಸಿ *ಇಂತೀ* ಎಂದು ಬರೆಯಬಹುದು. ಅದರ ಬದಲು *ಇಂತಿ* ಎಂದು ಬರೆದರೆ ಕುಂತಿ, ಅಲ್ಲ್ಯಾಕೆ ಹಾಗೆ ತಪ್ಪಾಗಿ ನಿಂತಿ? ಏನಂತಿ? ಎಂದು ಕೇಳಬೇಕಾಗುತ್ತದೆ!
  ====

    3. ಚ ಕ್ಕೆ ಚ ಒತ್ತಾ ಅಥವಾ ಛ ಒತ್ತಾ?
    ಉಚ್ಚ (ಎತ್ತರದ), ಉಚ್ಚಾರ (pronunciation), ಉಚ್ಚಾಟನ (ಬುಡಸಹಿತ ತೆಗೆಯುವುದು), ಉಚ್ಚೈ:ಶ್ರವಸ್ (ಇಂದ್ರನ ಕುದುರೆ) - ಇಲ್ಲೆಲ್ಲ ಚ ಕ್ಕೆ ಚ ಒತ್ತು.
   ಇಚ್ಛೆ (ಆಸೆ), ಉಚ್ಛಿಷ್ಟ (ಎಂಜಲಿನ), ಉಚ್ಛ್ರಾಯ (ಅಭಿವೃದ್ಧಿ), ಉಚ್ಛ್ವಾಸ (ಉಸಿರು), ಸ್ವಚ್ಛ (ನಿರ್ಮಲ), ಗುಚ್ಛ (ಗೊಂಚಲು), ಪುಚ್ಛ (ಬಾಲ), ಮ್ಲೇಚ್ಛ (ಅನಾಗರಿಕ) - ಇಲ್ಲೆಲ್ಲ ಚ ಕ್ಕೆ ಛ ಒತ್ತು.
                                          ಬರಃ;ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
     FEEDBACK: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries