ಕಾಸರಗೋಡು: ಜಿಲ್ಲೆಯ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರ ಒದಗಿಸುವ ಯೋಜನೆ `ಮಧುರಂ ಪ್ರಭಾತಂ' ಆ.16ರಂದು ಆರಂಭಗೊಳ್ಳಲಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ವಿಶೇಷ ಕಾಳಜಿಯಿಂದ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ. ಬೆಳಗ್ಗಿನ ಉಪಹಾರ ಸೇವಿಸಲು ಗತ್ಯಂತರವಿಲ್ಲದೆ ಕೆಲವು ಶಾಲೆಗಳಿಗೆ ಮಕ್ಕಳು ಹಾಜರಾಗುತ್ತಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಳಗ್ಗಿನ ಉಪಹಾರ ಒದಗಿಸಲಾಗುವುದು. ಈ ಯೋಜನೆಯ ಯಶಸ್ಸಿಗಾಗಿ ಜಿಲ್ಲಾಧಿಕಾರಿ ಅಂತಹ ಶಾಲೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಸ್ಥಿತಿ ಗಮನಿಸಿದ್ದಾರೆ. ಒಂದು ಕಿ.ಮೀ. ಆಸುಪಾಸಿನ ಹೋಟೆಲ್ ಇತ್ಯಾದಿಗಳಿಲ್ಲದ ಶಾಲೆಗಳಿಗೆ ಅವರು ಆಗಮಿಸಿ ಮಾಹಿತಿ ಸಂಗ್ರಹಿಸಿರುವರು. ಬಾನಂ ಸರಕಾರಿ ಪ್ರೌಢಶಾಲೆ, ಕೋಡೋಂ ಸರಕಾರಿ ಪ್ರೌಢಶಾಲೆ, ಪೆರಿಯ ಪುಳಿಕ್ಕಾಲ್ ಎಂ.ಜಿ.ಎಲ್.ಸಿ.ಗಳಿಗೆ ಅವರು ಬಂದಿದ್ದರು. ಅಲ್ಲಿನ ಶಿಕ್ಷಕರ, ಸಿಬ್ಬಂದಿಗಳ ಜೊತೆ ಈ ಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಿದ್ದಾರೆ. ಈ ಮಾತುಕತೆಯ ಹಿನ್ನೆಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ಆಯಾ ಶಾಲಾ ಮಟ್ಟದ ಯೋಜನೆಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಸಿದ್ಧರಾಗಿರುವುದಾಗಿ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಆಡಳಿತೆ ಸಮಿತಿ ಸದಸ್ಯ ಅಜಯನ್ ಪನೆಯಾಲ್, ವಿ.ಸೂರಜ್ ಮೊದಲಾದವರು ಈ ವೇಳೆ ಜಿಲ್ಲಾಧಿಕಾರಿಗಳ ಜತೆಗಿದ್ದರು.
(ಚಿತ್ರ ಮಾಹಿತಿ : ಮಧುರಂ ಪ್ರಭಾತಂ ಯೋಜನೆ ಜಾರಿ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕೋಡೋ ಸರಕಾರಿ ಪ್ರೌಢಸಾಲೆ ಶಿಕ್ಷಕರ ಜತೆ ಮಾತುಕತೆ ನಡೆಸಿದರು.)


