HEALTH TIPS

ಸಮಸರಸ ಶಬ್ದಾಂತರಂಗ ಸೌರಭ-ಸಂಚಿಕೆ-20-ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

                   ಮೂರು ಟಿಪ್ಪಣಿಗಳು ಇಲ್ಲಿವೆ.
೧.  ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಕೋರಿರುವ ‘ಸಹಾಯಾಸ್ತ’!
ಕರ್ನಾಟಕ ರಾಜ್ಯದ ಬೆಳಗಾವಿ, ಉತ್ತರಕನ್ನಡ, ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ೧೫ ಜಿಲ್ಲೆಗಳಲ್ಲಿ ಅತಿವೃಷ್ಟಿ(ಪ್ರಕೃತಿ ವಿಕೋಪ) ಸಂಭವಿಸಿರುವ ಹಿನ್ನೆಲೆಯಲ್ಲಿ, ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (ಪರಿಹಾರ ನಿಧಿ ಶಾಖೆ) ಪಿ.ಎ.ಗೋಪಾಲ್. ಗಮನಿಸಿ: ‘ಪಿ.ಎ’ ಅವರ ಹೆಸರಿನ ಇನಿಷಿಯಲ್ಸ್. ಹುದ್ದೆಯ ಹ್ರಸ್ವ ರೂಪ ಅಲ್ಲ.
ಸಮಯೋಚಿತವಾದ ಮತ್ತು ಮನಮುಟ್ಟುವಂತಿರುವ ಮನವಿ ಅದು. ಆದರೆ, ಕರ್ನಾಟಕ ಸರ್ಕಾರದ ಲಾಂಛನ ಇರುವ, ಮುಖ್ಯಮಂತ್ರಿಗಳ ಪರವಾಗಿ ಜಂಟಿ ಕಾರ್ಯದರ್ಶಿ ಸಹಿ ಮಾಡಿರುವ, ಮನವಿ ಪತ್ರದಲ್ಲಿ ಕನ್ನಡ ಭಾಷೆ ಬಳಕೆಯಲ್ಲಿ ಎಡವಟ್ಟಾಗಿದೆ! ಈ ಕೆಳಗಿನ ವಾಕ್ಯವನ್ನು ನೋಡಿ:
“ಪ್ರಕೃತಿ ವಿಕೋಪದಿಂದಾಗಿ ನೊಂದ ಸಂತ್ರಸ್ಥರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ಸಹಾಯಾಸ್ತ ಚಾಚಲು ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಲು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸ್ವಪ್ರೇರಣೆಯಿಮದ ದೇಣಿಗೆ ನೀಡಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ."
ಇದರಲ್ಲಿ-ಅ) ‘ಸಂತ್ರಸ್ಥ’ ತಪ್ಪು. ಅದು ಸಂತ್ರಸ್ತ ಎಂದಿರಬೇಕಿತ್ತು.
ಆ) ‘ಸಹಾಯಾಸ್ತ’ ತಪ್ಪು. ಅದು ಸಹಾಯಹಸ್ತ ಎಂದಿರಬೇಕಿತ್ತು. ‘ಹಸ್ತ’ ಕಂಡರೆ ಸಾಹೇಬ್ರು ಸಿಡಿದೇಳಬಹುದು ಎಂದುಕೊಂಡು ಜಂಟಿ ಕಾರ್ಯದರ್ಶಿಯವರು ಮನವಿ ಪತ್ರದ ಲಿಪಿಕಾರರಿಗೆ ಬೆರಳು ತೋರಿಸಿ ಹಸ್ತವನ್ನೇ ನುಂಗಿದರೋ ಹೇಗೆ? ಆದರೆ ಸಹಾಯಾಸ್ತ  (ಸಹಾಯ + ಅಸ್ತ ?) ಎಂದು ಬರೆದಿರುವುದರಿಂದ ಸಹಾಯ ಅಸ್ತ ಆಯ್ತಲ್ಲ! ಛೇ. ಎಂಥ ಅಧ್ವಾನ.
ಇ) ‘ಸ್ವಪ್ರೇರಣೆಯಿಮದ' ತಪ್ಪು. ಅದು ಸ್ವಪ್ರೇರಣೆಯಿಂದ ಎಂದಿರಬೇಕಿತ್ತು. ಬಹುಶಃ ನುಡಿ ತಂತ್ರಾಂಶದಲ್ಲಿ ಅನುಸ್ವಾರ ಕೀಲಿಯಿಂದಾದ ತಪ್ಪು.

[‘ಸಹಾಯಾಸ್ತ’ವನ್ನು ಗಮನಿಸಿ ಕಳುಹಿಸಿದವರು: ಸಿ.ಎಸ್. ಚಂದು]
====
೨. ಹಿಂದೀ ಭಾಷೆಯ ಝ ಕನ್ನಡದಲ್ಲಿ ಬರೆದಾಗ ಜ ಆಗದು
ಸುಷ್ಮಾ ಸ್ವರಾಜ್ ಆಗಸ್ಟ್ ೬ರಂದು ತಡರಾತ್ರಿಯಲ್ಲಿ ನಿಧನರಾದರು. ಪತ್ರಿಕೆಗಳ ಮರುದಿನದ (ಆಗಸ್ಟ್ ೭ರ) ಸಂಚಿಕೆಯ ಪುಟಗಳು ಸಿದ್ಧವಾಗಿ ಆಗಲೇ ಮುದ್ರಣಕ್ಕೆ ಹೋಗುವುದರಲ್ಲಿದ್ದವು. ಅಂತಹ ಕ್ಷಣದಲ್ಲೂ ಹೆಚ್ಚೂಕಡಿಮೆ ಎಲ್ಲ ಪತ್ರಿಕೆಗಳೂ ಸುಷ್ಮಾ ಅವರ ನಿಧನದ ಸುದ್ದಿಯನ್ನು ಆ ಸಂಚಿಕೆಯಲ್ಲೇ ಪ್ರಕಟಿಸಿದ್ದು ಪ್ರಶಂಸಾರ್ಹವೇ.
ವಿಜಯಕರ್ನಾಟಕ ಪತ್ರಿಕೆಯೂ ಆಗಸ್ಟ್ ೭ರ ಸಂಚಿಕೆಯ ಮುಖಪುಟದಲ್ಲೇ ಒಂದು ಕಪ್ಪು ಬಾಕ್ಸ್ ಐಟಂ ಮಾಡಿ ಯೋಗ್ಯ ರೀತಿಯಲ್ಲೇ ನಿಧನವಾರ್ತೆ ಪ್ರಕಟಿಸಿತು. ಗೌರವಪೂರ್ಣವಾಗಿ ಒಂದು ಪದಚಮತ್ಕಾರವನ್ನೂ ಮಾಡಿತು. “ಸುಷ್‌ಮಾ ತುಜೆ ಸಲಾಂ". ಸುಷ್ ಎಂಬ ಎರಡಕ್ಷರಗಳಿಗೆ ಬೇರೆ ಬಣ್ಣ ಕೊಟ್ಟು ಪ್ರಸ್ತುತಪಡಿಸಿದ ಒಳ್ಳೆಯ ಪದಚಮತ್ಕಾರವದು.
ಆದರೆ ‘ತುಜೆ’ ಅಲ್ಲ, ಅದು ‘ತುಝೇ’ ಎಂದಾಗಬೇಕಿತ್ತು. ಹಿಂದೀಯಲ್ಲಿ ತುಝೇ ಅಂದರೆ ನಿನಗೆ ಎಂದು ಅರ್ಥ. ಮಾ ತುಝೇ ಸಲಾಂ ಅಂದರೆ ತಾಯಿ ನಿನಗೆ ನಮಸ್ಕಾರ ಎಂದರ್ಥ. ‘ಮಾ ತುಝೇ ಸಲಾಂ’ - ಇದು ಎ.ಆರ್.ರಹಮಾನ್ ನಿರ್ಮಿಸಿದ ‘ವಂದೇ ಮಾತರಮ್’ ಆಲ್ಬಮ್‌ನ ಒಂದು ಸುಪ್ರಸಿದ್ಧ ಟ್ರ್ಯಾಕ್.
ಹಿಂದೀ ಭಾಷೆಯ ಝ ಅಕ್ಷರವನ್ನು ಕನ್ನಡ ಪತ್ರಿಕೆಗಳು ಜ ಎಂದು ಕೆಟ್ಟದಾಗಿ ಬರೆಯುವ ಇನ್ನೊಂದು ನಿದರ್ಶನ ‘ಸಂಜೋತಾ ಎಕ್ಸ್‌ಪ್ರೆಸ್’. ದಿಲ್ಲಿ ಮತ್ತು ಲಾಹೋರ್ ನಡುವಿನ ರೈಲುಸೇವೆ, ಈಗ ರದ್ದಾಗಿದೆ. ಆ ರೈಲಿನ ಹೆಸರನ್ನು ಕನ್ನಡದಲ್ಲಿ ‘ಸಮ್‌ಝೌತಾ’ ಎಂದು ಬರೆಯಬೇಕು. ಹಿಂದೀ ಭಾಷೆಯಲ್ಲಿ समझौता ಅಂದರೆ ಒಪ್ಪಂದ, ಒಡಂಬಡಿಕೆ, ಸಹಮತ ಎಂದು ಅರ್ಥ. ‘ಸಂಝೌತಾ’ ಎಂದು ಕೂಡ ಬರೆಯಬಹುದು. ಆದರೆ ‘ಸಂಜೋತಾ’ ಎಂದು ಬರೆಯುವುದು ತಪ್ಪು. ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಕನ್ನಡಪ್ರಭ... ಹೀಗೆ ಕನ್ನಡದ ಪ್ರಮುಖ ದಿನಪತ್ರಿಕೆಗಳೆಲ್ಲವೂ ‘ಸಂಜೋತಾ’ ಎಂದು ತಪ್ಪಾಗಿ ಬರೆಯುತ್ತವೆ. ಅಂಕಿತನಾಮವನ್ನು ನಮಗಿಷ್ಟ ಬಂದಂತೆ ಬರೆಯಲಾಗದು. ಈ ವಿಷಯದಲ್ಲಿ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ಮೊದಲಾದ ಅಮೆರಿಕನ್ ಪತ್ರಿಕೆಗಳನ್ನು ಮೆಚ್ಚಬೇಕು. ಅವುಗಳ ಸುದ್ದಿ ಪ್ರಸ್ತುತಿಯ ಟೋನ್ ಭಾರತಕ್ಕೆ ವಿರುದ್ಧವಾಗಿರುತ್ತದಾದರೂ ಭಾರತೀಯ ಹೆಸರುಗಳದು ಇಂಗ್ಲಿಷ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಕರಾರುವಾಕ್ಕಾಗಿ ಸ್ಪೆಲ್ಲಿಂಗ್ ಇರುತ್ತವೆ (ಹಿಂದೀ ಭಾಷೆಯ ದೇವನಾಗರಿ ಲಿಪಿಗೂ ಇಂಗ್ಲಿಷ್‌ ಭಾಷೆಯ ರೋಮನ್ ಲಿಪಿಗೂ one-to-one ತಾಳೆಯಿಲ್ಲದಿದ್ದರೂ). ಮೊನ್ನೆ ಸಂಝೌತಾ ಎಕ್ಸ್‌ಪ್ರೆಸ್ ರೈಲು ರದ್ದಾದ ಸುದ್ದಿಯನ್ನು ವಾಷಿಂಗ್ಟನ್ ಪೋಸ್ಟ್ “The move comes a day after Pakistan suspended the Samjhauta Express, or Friendship Express, train service which links India from the city of Lahore." ಎಂದೇ ಬರೆದಿತ್ತು. ‘ಸಮ್‌ಝೌತಾ’ಗೆ ನಿಕಟವಾದ ಇಂಗ್ಲಿಷ್ ಸ್ಪೆಲ್ಲಿಂಗ್ Samjhauta. ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ‘Sanjota' ಅಂತೆಲ್ಲ ಬರೆಯಲಿಲ್ಲ. ಅಂದಮೇಲೆ ಕನ್ನಡ ದಿನಪತ್ರಿಕೆಗಳು, ಹಿಂದೀ ಭಾಷೆಯ ದೇವನಾಗರಿ ಲಿಪಿಗೂ ಕನ್ನಡ ಲಿಪಿಗೂ ಹೆಚ್ಚೂಕಡಿಮೆ one-to-one ತಾಳೆಯಾಗುವಾಗ, ‘ಸಂಝೌತಾ’ ಎಂದು ಬರೆಯುವ ಬದಲು ‘ಸಂಜೋತಾ’ ಎಂದೇಕೆ ಬರೆಯುತ್ತವೆ? ಇನ್ನು ಕೆಲವಂತೂ ‘ಸಂಜೋತ’ ಎಂದು ಬರೆದು ಮತ್ತಷ್ಟು ಅಧ್ವಾನಗೊಳಿಸುತ್ತವೆ.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಗೋಪ್ಯ ಸರಿ. ರಕ್ಷಿಸಲ್ಪಡುವ, ರಹಸ್ಯವಾಗಿಡಲ್ಪಡುವ, ರಕ್ಷಿಸಲ್ಪಡಬೇಕಾದ ಎಂಬರ್ಥದ ವಿಶೇಷಣ ಪದ. ಕನ್ನಡದಲ್ಲಿ ನಾಮಪದವಾಗಿಸಲು ಗೋಪ್ಯತೆ ಎಂದು ಬರೆಯಬಹುದು. ಗೌಪ್ಯತೆ ತಪ್ಪು.
ಆ) ಉತ್ತಿಷ್ಠ ಸರಿ. ಎದ್ದೇಳು ಎಂಬ ಅರ್ಥ. ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಎಂದು ವೇಂಕಟೇಶ ಸುಪ್ರಭಾತದಲ್ಲಿ ಬರುತ್ತದೆ. ಉತ್ತಿಷ್ಟ ಎಂದು ಬರೆಯುವುದು ತಪ್ಪು.
ಇ) ವೃಥಾ ಸರಿ. ವ್ಯರ್ಥವಾಗಿ, ನಿರರ್ಥಕವಾಗಿ ಎಂದು ಅರ್ಥ. ಉದಾ: ವೃಥಾ ಕಿರಿಕಿರಿ ತರುವಂತಹ ಜನರನ್ನು ನಯವಾಗಿಯೇ ದೂರವಿಡಿ. ವ್ಯಥಾ ಎಂದು ಬರೆದರೆ ನೋವು, ದುಃಖ, ಭಯ ಎಂಬರ್ಥ ಬರುತ್ತದೆ.
ಈ) ಪಿತೃ ಸರಿ. ತಂದೆ, ವಂಶದ ಹಿರಿಯರು ಎಂದು ಅರ್ಥ. ಪಿತ್ರು ಎಂದು ಬರೆಯಬಾರದು.
ಉ) ಪುರುಷೋತ್ತಮ ಸರಿ. ವಿಷ್ಣು, ಪರಮಾತ್ಮ, ಪುರುಷಶ್ರೇಷ್ಠ, ಉತ್ತಮ ಗುಣಗಳಿಂದ ಕೂಡಿದ ಪುರುಷ ಎಂದು ಅರ್ಥ. ಪುರುಶ ಎಂಬ ಪದ ಸಂಸ್ಕೃತದಲ್ಲಿಲ್ಲ, ಆದ್ದರಿಂದ ಪುರುಶೋತ್ತಮ ಎಂದು ಬರೆದರೆ ಅರ್ಥಬದ್ಧ ಪದ/ಹೆಸರು ಆಗುವುದಿಲ್ಲ.
                                                   ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
.
===========

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries