ಪುಸ್ತಕ : ಚಿಮಣಿಯ ಬೆಳಕಿನಲ್ಲಿ
ಲೇಖಕರು: ಈರಣ್ಣ ಬೆಂಗಾಲಿ
ವಿಮರ್ಶಾ ಬರಹ:ಚೇತನಾ ಕುಂಬಳೆ
ಚಿಮಣಿಯ ಬೆಳಕಿನಲ್ಲಿ ಕಂಡ ಗಜಲ್ ಗಳ ಸುತ್ತ...
ಈರಣ್ಣ ಬೆಂಗಾಲಿಯವರ
*ಚಿಮಣಿಯ ಬೆಳಕಿನಲ್ಲಿ* ಗಜಲ್ ಸಂಕಲನದ
ಮೊದಲ ಭಾಗದಲ್ಲಿ ಗಜಲ್ ಗಳ ಬಗೆಗಿನ ಅಭಿಪ್ರಾಯಗಳನ್ನು ಕಾಣಬಹುದು.
ಈ ಅಭಿಪ್ರಾಯಗಳು ಈರಣ್ಣ ಬೆಂಗಾಲಿಯವರ ಕಿರು ಪರಿಚಯವನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಸಾಹಿತ್ಯ ಬರಹಗಳಲ್ಲಿ ಮಾತ್ರವಲ್ಲದೆ ವ್ಯಂಗ್ಯಚಿತ್ರ ರಚನೆಯ ಮೂಲಕವೂ ತಮ್ಮ ಪ್ರತಿಭೆಯನ್ನು ತೋರಿರುವುದನ್ನು ಗಮನಿಸಬಹುದು. ಉರ್ದು ಸಾಹಿತ್ಯ ಪ್ರಕಾರವಾದ ಗಜಲ್ ಕನ್ನಡಕ್ಕೆ ಪರಿಚಯಿಸಿದ ಹಿರಿಯ ಗಜಲ್
ರಚನಕಾರರಾದ ಶಾಂತರಸರು, ಮುಕ್ತಾಯಕ್ಕ ಮೊದಲಾದವರ ಉಲ್ಲೇಖ ಇಲ್ಲಿದೆ.
ಉರ್ದುವಿನಲ್ಲಿರುವ ಒಂದಷ್ಟು ಸಾಹಿತ್ಯ ಪ್ರಕಾರಗಳು, ಅವುಗಳಲ್ಲೂ ಪ್ರೀತಿ ಪ್ರೇಮಗಳಿಗೆ ಆಧ್ಯತೆ ನೀಡಿರುವ ಗಜಲ್ ಪ್ರಕಾರದ ಕುರಿತು ವಿವಿಧ ಲೇಖಕರು ಹೇಳಿದ ಮಾತುಗಳು, ಗಜಲ್ ನ ಸ್ವರೂಪ, ಲಕ್ಷಣಗಳ ಕುರಿತ ಸಂಕ್ಷಿಪ್ತ ಮಾಹಿತಿಗಳನ್ನು ನೀಡಿರುವುದು ಗಜಲ್ ಅಧ್ಯಯನ ಮಾಡುವವರಿಗೆ ಸಹಾಯಕವಾಗಿದೆ. ಅನ್ಯ ರಾಜ್ಯದ ಭಾಷೆಗಳಲ್ಲೂ ಗಜಲ್ ನ ಪ್ಲಭಾವ ಎಷ್ಟರ ಮಟ್ಟಿಗಿದೆ, ಅಲ್ಲಿರುವ ಗಜಲ್ ರಚನಕಾರರ ಮಾಹಿತಿರನ್ನು ನೀಡಿರುವುದು ಗಮನಾರ್ಹವಾಗಿದೆ. ಇದರೊಂದಿಗೆ ಗಜಲ್ ನಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳ ಕುರಿತೂ ಹೇಳಲಾಗಿದೆ.
ಈ ಸಂಕಲನಕ್ಕೆ ವಿ.ಎಸ್ ಕಾಂತನವರ ಮುನ್ನುಡಿ, ಹಾಗೂ ಕುಂ. ವೀರಭದ್ರಪ್ಪನವರು ಬೆನ್ನುಡಿ ಬರೆದಿದ್ದಾರೆ. ಇವರ ಸಂಕಲನದಲ್ಲಿ ಒಟ್ಟು 50 ಗಜಲ್ ಗಳಿದ್ದು, ಪ್ರೀತಿ ಪ್ರೇಮ, ತಾಯಿ, ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ , ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬಗೆಗಿನ ನಿರ್ಲಕ್ಷ್ಯ, ರೈತನ ಬಗ್ಗೆ, ವಾಸ್ತವ ಬದುಕಿನ ಚಿತ್ರಣ, ದಲಿತರ ಶೋಷಣೆ, ಮಣ್ಣಿನ ಮಹತ್ವ ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿರುವುದನ್ನು ಕಾಣಬಹುದು. ಈ ಗಜಲ್ ಗಳಲ್ಲಿ ಸಾಕಿ, ಮೊಹಬ್ಬತ್, ಮಧುಶಾಲೆ, ಕಫನ್, ಮುಂತಾದ ಅನ್ಯ ಭಾಷಾ ಪದಗಳನ್ನು ಸಂದರ್ಭೋಚಿತವೋಗಿ ಬಳಸಿ ಗಜಲ್ ಗಳನ್ನು.ರಚಿಸಿರುವುದನ್ನು ಕಾಣಬಹುದು. ಇಲ್ಲಿ ರದೀಫ್ ಸಹಿತ ಮತ್ತು ರದೀಫ್ ರಹಿತ ಎರಡೂ ವಿಧಧ ಗಜಲ್ ಗಳೊಡನೆ, ಮತ್ಲಾ, ಮಕ್ತಾ, ಕಾಫಿಯಾ, ರವಿ, ರದೀಫ್ ಹೀಗೆ ನಿಯಮಗಳಿಗೆ ಬಧ್ಧರಾಗಿಯೇ ಗಜಲ್ ಗಳನ್ನು ರಚಿಸಿರುವುದನ್ನು ಗಮನಿಸಬಹುದು.
ಪ್ರತಿ ಗಜಲ್ ಗಳಿಗೂ ರಚಿಸಿದ ಚಿತ್ರಗಳು ಓದುಗರ ಮನ ಸೆಳೆಯುತ್ತವೆ.
"ಜಗದೊಡಲ ನೋವನ್ನು ಕರಗಿಸಲು ನಾನು ಶಕ್ತನಲ್ಲ"
"ಜಗದ ಬಯಲಲಿ ನಿರಂತರ ಧರ್ಮಗಳ ತಿಕ್ಕಾಟ, ಮನುಜ ಮತಗಳು ನಾಪತ್ತೆ"
"ಕಫನ್ ಸುತ್ತುವರು ನನ್ನ ದೇಹಕ್ಕೆ ಉಸಿರು ನಿಂತ ಮೇಲೆ"
"ಬಳ್ಳಿಯಿಂದ ದೂರವಾದರೂ ಹೂ ಸುವಾಸನೆ ಬೀರುತ್ತದೆ" ಹೀಗೆ ಗಜಲ್ ಗಳ ಹಲವು ಸಾಲುಗಳು ಮನವನ್ನು ಮುಟ್ಟುತ್ತವೆ.ತಟ್ಟುತ್ತವೆ ಮತ್ತೆ ಮತ್ತೆ ಕಾಡುತ್ತವೆ.
ಇವರ ಲೇಖನಿಯಿಂದ ಇನ್ನಷ್ಟು ಗಜಲ್ ಗಳು ಸೃಷ್ಟಿಯಾಗಲಿ. ಸಹೃದಯರು ಓದುವಂತಾಗಲಿ..
ಚೇತನಾ ಕುಂಬ್ಳೆ




