HEALTH TIPS

370 ನೇ ವಿಧಿ ರದ್ದು: ಭಾರತದ ಭದ್ರತೆ, ಸುರಕ್ಷತೆ ಮತ್ತು ಸಮಗ್ರತೆ ಸದೃಢ- ವೆಂಕಯ್ಯನಾಯ್ಡು

   
     ಚಂಡೀಗಡ: ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿರುವುದರಿಂದ ಭಾರತದ ಭದ್ರತೆ, ಸುರಕ್ಷತೆ ಮತ್ತು ಸಮಗ್ರತೆ ಸದೃಢವಾಗಲಿದ್ದು, ಇದನ್ನು ಬೇರೆ ಯಾವುದೇ ಆಯಾಮದಿಂದ ನೋಡಬಾರದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ.
     ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬುಧವಾರ ಮೊದಲ ಬಲರಾಮ್‍ಜಿ ದಾಸ್ ಟಂಡನ್ ಸ್ಮಾರಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
    ಉಪರಾಷ್ಟ್ರಪತಿಯವರು ಮಾತನಾಡುತ್ತ ಜಮ್ಮು ಮತ್ತು ಕಾಶ್ಮೀರ ಎಂದಿಗೂ ದೇಶದ ಅವಿಭಾಜ್ಯ ಅಂಗವಾಗಿದ್ದು, ಹಾಗೆಯೇ ಉಳಿಯುತ್ತದೆ. ಪಾಶ್ಚಿಮಾತ್ಯ ಮಾಧ್ಯಮಗಳ ಒಂದು ವರ್ಗ ಜಮ್ಮು-ಕಾಶ್ಮೀರದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರದ ಪರಿಸ್ಥಿತಿಯ ಬಗ್ಗೆ ಸುಳ್ಳು ಪ್ರಚಾರದಲ್ಲಿ ತೊಡಗಿರುವುದಕ್ಕೆ ತಮ್ಮ ವಿಷಾಧವಿದೆ ಎಂದು ಹೇಳಿದ್ದಾರೆ.
     ವೆಂಕಯ್ಯನಾಯ್ಡು ಅವರು 1964 ರಲ್ಲಿ ರಾಷ್ಟ್ರೀಯ ದಿನಪತ್ರಿಕೆಯೊಂದು ಪ್ರಕಟಿಸಿದ ಸುದ್ದಿ ಲೇಖನವೊಂದನ್ನು ಉಲ್ಲೇಖಿಸಿದರು. 370 ನೇ ವಿಧಿಯನ್ನು ರದ್ದುಗೊಳಿಸುವಂತೆ ಕೋರಿ ಲೋಕಸಭೆಯಲ್ಲಿ ಮಂಡಿಸಿದ್ದ ಅಧಿಕೃತವಲ್ಲದ ನಿರ್ಣಯವನ್ನು ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ಪಕ್ಷಾತೀತವಾಗಿ ಬಹುತೇಕ ಸಂಸದರು ಸರ್ವಾನುಮತದಿಂದ ಬೆಂಬಲಿಸಿದ್ದರು ಎಂದು ಅವರು ಹೇಳಿದರು.
     ಸುದ್ದಿಯ ವಿವರಗಳನ್ನು ಓದಿದ ಉಪರಾಷ್ಟ್ರಪತಿಯವರು, ಲೋಕಸಭೆಯಲ್ಲಿ ಪ್ರಕಾಶ್ ವೀರ್ ಶಾಸ್ತ್ರಿ ಅವರು ಮಂಡಿಸಿದ ಸದಸ್ಯರ ಖಾಸಗಿ ನಿರ್ಣಯವನ್ನು ರಾಮ್ ಮನೋಹರ್ ಲೋಹಿಯಾ ಅವರಂತಹ ನಾಯಕರು ಬೆಂಬಲಿಸಿದ್ದರು. 370 ನೇ ವಿಧಿಯನ್ನು ರದ್ದುಮಾಡಲು ಒಲವು ತೋರಿದ 12 ಸದಸ್ಯರಲ್ಲಿ ಏಳು ಮಂದಿ ಕಾಂಗ್ರೆಸ್‍ಗೆ ಸೇರಿದವರಾಗಿದ್ದರು. ಇವರಲ್ಲಿ ಇಂದರ್ ಜೆ ಮಲ್ಹೋತ್ರಾ, ಶಾಮ್ ಲಾಲ್ ಸರಾಫ್ (ಜಮ್ಮು-ಕಾಶ್ಮೀರ) ಮತ್ತು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಕೆಂಗಲ್ ಹನುಮಂತಯ್ಯ ಸೇರಿದ್ದರು ಎಂದು ತಿಳಿಸಿದರು.
     1963 ರಲ್ಲಿ ಮತ್ತೊಂದು ರಾಷ್ಟ್ರೀಯ ದಿನಪತ್ರಿಕೆ ಪ್ರಕಟಿಸಿದ ವರದಿಯನ್ನು ಅವರು ಉಲ್ಲೇಖಿಸಿದರು. 370 ನೇ ವಿಧಿಯನ್ನು ಕ್ರಮೇಣ ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಆ ದಿಕ್ಕಿನಲ್ಲಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಲೋಕಸಭೆಗೆ ತಿಳಿಸಿದ್ದರು ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries