ಕತಾರ್: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಸಹಿತ ಕಾಸರಗೋಡಿನ ಯುವ ಪ್ರತಿಭೆ ಪ್ರಕಾಶ್ ತೂಮಿನಾಡು ಅವರಿಗೆ ಈ ಸಾಲಿನ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ಕತಾರ್ ನಲ್ಲಿ ನಡೆಯುತ್ತಿರುವ ಎಂಟನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'ಕೆಜಿಎಫ್ ಚಾಪ್ಟರ್ 1' ಚಿತ್ರದ ಅಭಿನಯಕ್ಕಾಗಿ ರಾಕಿಭಾಯ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಗಳಿಸಿಕೊಂಡರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಕೊಡುಗೆ ರಾಮಣ್ಣ ರೈ ಚಲನಚಿತ್ರದ ಮನೋಜ್ಞ ಅಭಿನಯಕ್ಕಾಗಿ ಪ್ರಕಾಶ್ ತೂಮಿನಾಡು ಅವರಿಗೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಲಭಿಸಿ ದಾಖಲೆಯೊಂದು ನಿರ್ಮಾಣವಾಗಿದೆ.
ಇದಲ್ಲದೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಮಿಕ್ಕುಳಿದಂತೆ ಟಗರು ಚಿತ್ರದಲ್ಲಿನ ಡಾಲಿ ಪಾತ್ರದ ಧನಂಜಯ್ ಅತ್ಯುತ್ತಮ ಖಳನಟ, ಕೆಜಿಫ್ ನಲ್ಲಿ ತಾಯಿ ಪಾತ್ರಧಾರಿಯಾಗಿದ್ದ ನಟಿ ಅರ್ಚನಾ ಅತ್ಯುತ್ತಮ ಪೋಷಕ ನಟಿ, ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಅತ್ಯುತ್ತಮ ಡೆಬ್ಯು ನಿರ್ದೇಶಕ, ಆ ಕರಾಳ ರಾತ್ರಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ಡೆಬ್ಯು ನಟಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಮಂಜೇಶ್ವರ: ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ ಚಲನಚಿತ್ರದಲ್ಲಿ ಜನಮನಸೂರೆಗೊಳ್ಳುವ ಪಾತ್ರವಾದ ಭುಜಂಗನ ವೈಶಿಷ್ಟ್ಯಪೂರ್ಣ ಅಭಿವ್ಯಕ್ತಿಗಾಗಿ ಕಲಾವಿದ ಪ್ರಕಾಶ್ ತೂಮಿನಾಡು ಅವರಿಗೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಲಭ್ಯವಾಗಿದೆ.
ಸೈಮಾ ಅವಾರ್ಡ್ ಲಭಿಸಿದ ಕಾಸರಗೋಡಿನ ಮೊದಲ ಕಲಾವಿದರೂ ಪ್ರಕಾಶ್ ತೂಮಿನಾಡು ಆಗಿದ್ದು, ಇವರು ಗಡಿನಾಡು ಕಾಸರಗೋಡಿನ ಮಂಜೇಶ್ವರದವರು ಎನ್ನುವುದು ಹೆಚ್ಚು ಹೆಮ್ಮೆ ಎನಿಸಿದೆ. ರಂಗಕಲಾವಿದರಾದ ಇವರು ಹೊಸಂಗಡಿಯ ಶಾರದಾ ಕಲಾ ಆಟ್ರ್ಸ್ ತಂಡದ ಕಲಾವಿದರಾಗಿದ್ದಾರೆ.



