ಬದಿಯಡ್ಕ: ರಾಷ್ಟ್ರದ ಸಾರ್ವಭೌಮತೆ, ಸೌಹಾರ್ಧತೆಯನ್ನು ಕಾಪಿಡುವಲ್ಲಿ ಹೊಸ ತಲೆಮಾರು ಜವಾಬ್ದಾರಿಯುತ ಕರ್ತವ್ಯ ಪ್ರಜ್ಞೆಯನ್ನು ಅನುಸರಿಸಬೇಕು. ದೇಶದ ಸ್ವಾತಂತ್ರ್ಯ ಚಳವಳಿಯ ಪರಿಪೂರ್ಣ ಪರಿಕಲ್ಪನೆ ಜಾಗೃತವಾಗಿದ್ದಲ್ಲಿ ಪ್ರಜಾಪ್ರಭುತ್ವದ ಸ್ಥಾನ ಸಮರ್ಥವಾಗಿ ಸಂರಚನೆಗೊಂಡು ಮುಂದುವರಿಯಲು ಸಾಧ್ಯ ಎಂದು ಕುಂಬಳೆ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ ಅವರು ತಿಳಿಸಿದರು.
ನೀರ್ಚಾಲು ಸಮೀಪದ ಪುದುಕೋಳಿಯ ತತ್ವಮಸಿ ಫ್ರೆಂಡ್ಸ್ ಕ್ಲಬ್, ತತ್ವಮಸಿ ಬಾಲಗೋಕುಲ ಸಮಿತಿ ಹಾಗೂ ಅಂಗನವಾಡಿಯ ಸಂಯುಕ್ತ ಆಶ್ರಯದಲ್ಲಿ ಪುದುಕೋಳಿ ಅಂಗನವಾಡಿ ಪರಿಸರದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣಗೈದು ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮನ ಗ್ರಾಮಾಭಿವೃದ್ದಿಯ ಸಾಕಾರತೆಯಲ್ಲಿ ಯುವ ಜನರ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ. ಸಾಮಾಜಿಕ ಅಸಮತೋಲನ, ಬಡತನ ಮೊದಲಾದ ಸವಾಲುಗಳನ್ನು ದೇಶವು ಸಮರ್ಥವಾಗಿ ಪರಿಹರಿಸಿ ಜಾಗತಿಕ ಮಟ್ಟದಲ್ಲಿ ಇಂದು ಮಹತ್ವದ ಸ್ಥಾನ ಗಳಿಸಿಕೊಂಡಿದೆ. ವಿಜ್ಞಾನ, ತಂತ್ರಜ್ಞಾನ ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ರಾಷ್ಟ್ರದ ಪ್ರಧಾನ ವ್ಯವಸ್ಥೆಯಾದ ಕೃಷಿ ಕ್ಷೇತ್ರವನ್ನು ಯಾವತ್ತೂ ಅವಗಣಿಸುವಂತಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾತ್ಮಕ ಚಳವಳಿಗಳ ಮೂಲಕ ಕೃಷಿಯಲ್ಲಿ ಯುವಜನರ ತೊಡಗಿಸುವಿಕೆಯನ್ನು ಬಲಪಡಿಸುವಲ್ಲಿ ಹಿರಿಯರು ಪಾತ್ರವಹಿಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತತ್ವಮಸಿ ಫ್ರೆಂಡ್ಸ್‍ನ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅವರು ಮಾತನಾಡಿ, ದಾಸ್ಯದಿಂದ ಮುಕ್ತಿಗೊಂಡು ಲಭಿಸಿದ ಸ್ವಾತಂತ್ರ್ಯ ಹೋರಾಟದ ಹಿಂದೆ ಸಾವಿರಾರು ಪೂರ್ವಜರ ನಿಖರ ಲೆಕ್ಕಾಚಾರಗಳು, ಹೋರಾಟ, ತ್ಯಾಗಗಳ ಋಣ ಇದೆ. ಈ ಹಿನ್ನೆಲೆಯ ಅರಿವು ನಮ್ಮಲ್ಲಿ ಸದಾ ಜಾಗೃತವಾಗಿದ್ದಲ್ಲಿ ಮಾತ್ರ ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಮನೋಸ್ಥಿತಿ ನಿರ್ಮಾಣವಾಗಲು ಸಾಧ್ಯ ಎಂದು ತಿಳಿಸಿದರು. ಪ್ರತಿಯೊಬ್ಬರ ಅಂತಃಕರಣದಲ್ಲಿ ರಾಷ್ಟ್ರ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು, ವೀರ ಸೈನಿಕರ ಬಗ್ಗೆ ಪೂಜ್ಯ ಭಾವ ಸದಾ ನೆಲೆಗೊಂಡಿರಬೇಕು ಎಂದು ತಿಳಿಸಿದ ಅವರು ರಾಷ್ಟ್ರಾಭಿಮಾನವನ್ನು ಎಳೆಯರಲ್ಲಿ ಮೂಡಿಸುವಲ್ಲಿ ಹೆತ್ತವರು, ಪಾಲಕರು ಕರ್ತವ್ಯ ನಿಷ್ಠರಾಗಿರಬೇಕು ಎಂದು ಕರೆನೀಡಿದರು.
ಅಂಗನವಾಡಿ ಶಿಕ್ಷಕಿ ಸುನಿತಾ ಟೀಚರ್ ಉಪಸ್ಥಿತರಿದ್ದು ಶುಭಹಾರೈಸಿದರು. ಬಾಲಗೋಕುಲದ ಶಿಕ್ಷಕಿ ಪಲ್ಲವಿ ಸ್ವಾಗತಿಸಿ, ರಜನಿ ಸಂದೀಪ್ ವಂದಿಸಿದರು. ತತ್ವಮಸಿ ಫ್ರೆಂಡ್ಸ್ ಕಾರ್ಯದರ್ಶಿ ತಿಲಕ್ ರಾಜ್ ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಗೌರವಾಧ್ಯಕ್ಷ ಬಾಲಕೃಷ್ಣ ನಾಯಕ್ ಪುದುಕೋಳಿ, ವಿಜಯ, ಪದ್ಮನಾಭ, ಗೋಪಾಲಕೃಷ್ಣ ಭಟ್ ಪುದುಕೋಳಿ, ಸಂದೀಪ್ ಪುದುಕೋಳಿ, ಬಾಲಗೋಕುಲ ಸಹಾಯಕಿಯರಾದ ಹರ್ಷಿತ ಪುದುಗೋಳಿ,ಲಾವಣ್ಯ ಪುದುಕೋಳಿ,ಅಬ್ದುಲ್ಲ ಪುದುಕೋಳಿ, ಪವಿ,ಗಣೇಶ್ ಮೊದಲಾದವರು ನೇತೃತ್ವ ವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಥಳೀಯ ಮಕ್ಕಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಈ ಸಂದರ್ಭ ಗಣ್ಯರು ಬಹುಮಾನಗಳನ್ನು ವಿತರಿಸಲಾಯಿತು. ಸಿಹಿತಿಂಡಿಗಳನ್ನು ಹಂಚಿ ಹರ್ಷ ವ್ಯಕ್ತಪಡಿಸಲಾಯಿತು.



