ವಿಶಾಖಪಟ್ಟಣಂ: ಯುದ್ಧೋನ್ಮಾದದ ಪಾಕಿಸ್ತಾನ ಯುದ್ಧದ ಮಾತುಗಳಿಗೆ ಖಡಕ್ ತಿರುಗೇಟು ನೀಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪಾಕಿಸ್ತಾನ ತನ್ನ ಜೀವಮಾನದಲ್ಲೇ ಎಂದೂ ಮರೆಯಲಾರದಂತಹ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕುದಿಯುತ್ತಿರುವ ಪಾಕಿಸ್ತಾನದ ರಾಜಕೀಯ ನಾಯಕರು ಭಾರತದ ವಿರುದ್ಧ ದಿನಕ್ಕೊಂದು ಆರೋಪ ಮತ್ತು ಟೀಕಾ ಪ್ರಹಾರ ಮಾಡುತ್ತಿದ್ದು, ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ಇನ್ನೆರಡು ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೂ ಅಚ್ಚರಿ ಇಲ್ಲ ಎಂದು ಹೇಳಿದೆ,
ಪಾಕಿಸ್ತಾನದ ಈ ಯುದ್ಧೋನ್ಮಾದಕ್ಕೆ ಖಡಕ್ ತಿರುಗೇಟು ನೀಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, 'ಭಾರತ ಯಾರ ಮೇಲೂ ಕಾಲುಕೆರೆದು ದಾಳಿಗೆ ಮುಂದಾಗುವುದಿಲ್ಲ. ಆದರೆ, ಯಾರಾದರೂ ನಮ್ಮ ತಂಟೆಗೆ ಬಂದರೆ ತಕ್ಕ ಉತ್ತರ ಕೊಡುತ್ತೇವೆ, ನಾವು ಕಲಿಸೋ ಪಾಠವನ್ನು ಅವರು ಜೀವನಪಯರ್ಂತ ಮರೆಯಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಮ್ಮಲ್ಲಿ ಇಷ್ಟೊಂದು ತಂತ್ರ ಜ್ಞಾ ನ, ಶಸ್ತ್ರಾಸ್ತ್ರಗಳು ಏಕಿವೆ? ಡಿಆರ್ ಡಿಒ ಏಕಿದೆ? ನೌಕಾಪಡೆ, ವಾಯುದಳ, ಭೂ ಸೇನೆ ಇರೋದು ಏಕೆ? ಏಕೆಂದರೆ ಯಾರಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು. ಈವರೆಗೂ ಲೆಕ್ಕವಿಲ್ಲದಷ್ಟು ವಿದೇಶಿಗರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಆದರೆ ನಾವು ಯಾರ ವಿರುದ್ಧವೂ ದಾಳಿ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಮೇಲೆ ಈಗ ಯಾರಾದರೂ ದಾಳಿ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ನಾಯ್ಡು ಎಚ್ಚರಿಕೆ ನೀಡಿದ್ದಾರೆ.
ಯುದ್ಧೋನ್ಮಾದಿಗಳಲ್ಲ, ಶಾಂತಿಪ್ರಿಯರು ನಾವು:
ಇದೇ ವೇಳೆ ಪಾಕಿಸ್ತಾನದ ಯುದ್ಧನ್ಮಾದವನ್ನು ಟೀಕಿಸಿರುವ ವೆಂಕಯ್ಯನಾಯ್ಡು, 'ನಾವು ಯುದ್ಧೋನ್ಮಾದಿಗಳಲ್ಲ, ಶಾಂತಿಪ್ರಿಯರು. ಶಾಂತಿಯಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಪ್ರಕ್ಷುಬ್ಧ ವಾತಾವರಣವಿದ್ಧಾಗ ಅಭಿವೃದ್ಧಿ ಕಡೆಗೆ ಗಮನವಹಿಸಲು ಸಾಧ್ಯ ವಾಗೋದಿಲ್ಲ. ಇದು ನಮಗೆ ಗೊತ್ತು. ಆದರೆ, ಕೆಲವರು ಬೇಕೆಂದೇ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ನಮ್ಮ ನೆರೆಹೊರೆಯಲ್ಲೇ ಇದ್ದು ಉಗ್ರರಿಗೆ ಹಣಕಾಸಿನ ನೆರವು, ತರಬೇತಿ ಹಾಗೂ ಕುಮ್ಮುಕ್ಕು ನೀಡುತ್ತಿದ್ದಾರೆ ಎಂದು ಪಾಕ್ ವಿರುದ್ದ ಕಿಡಿಕಾರಿದರು.
ನೆರೆರಾಷ್ಟ್ರ ಇಷ್ಟೆಲ್ಲಾ ಕುತಂತ್ರಗಳು ಅವರಿಗೇ ನಷ್ಟ. ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆ ಮಾತನಾಡೋದು ಏನಿದೆ, ಅದು ಭಾರತದ ಅವಿಭಾಜ್ಯ ಅಂಗ. ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯೋ ವಿಚಾರವಾಗಿ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯಬೇಕಿದೆ ಎಂದರು.


