ಉಪ್ಪಳ: ಉತ್ತಮ ಸಂಸ್ಕಾರಗಳನ್ನು ನೀಡಿದಾಗ ಸದ್ಗುಣಗಳು ಮಕ್ಕಳಲ್ಲಿ ಜಾಗೃತವಾಗುತ್ತದೆ. ಶ್ರೀಕೃಷ್ಣನಲ್ಲಿ ಹುಟ್ಟಿನಿಂದಲೇ ಶ್ರೇಷ್ಠ ಸಂಸ್ಕಾರ ಅಡಕವಾಗಿತ್ತು. ಅಂತಹ ಉತ್ತಮ ಸಂಸ್ಕಾರ ನಮ್ಮ ಮಕ್ಕಳಿಗೆ ನೀಡುವ ಕೆಲಸ ಇಂದು ಬಾಲಗೋಕುಲಗಳು ಮಾಡುತ್ತಿವೆ ಎಂದು ಬಾಯಾರು ಮಂಡಲ ಬಾಲಗೋಕುಲಗಳ ಮಕ್ಕಳ ಕೃಷ್ಣವೇಷ ಶೋಭಾಯಾತ್ರೆಯ ಶುಕ್ರವಾರ ಸಂಜೆ ನಡೆದ ಸಮಾರೋಪದಲ್ಲಿ ಶಿಕ್ಷಕ, ಸಾಮಾಜಿಕ ಕಾರ್ಯಕರ್ತ ನಾರಾಯಣ ರಾಜ್ ಅವರು ಹೇಳಿದರು.
ಮನೆಯಲ್ಲಿಯೂ ಮಕ್ಕಳಿಗೆ ದೇಶಭಕ್ತಿಯ ಹಾಗೂ ಪೌರಾಣಿಕ ಕಥೆಗಳನ್ನು ತಿಳಿ ಹೇಳಬೇಕು. ಕೃಷ್ಣನ ವೇಷ ಧರಿಸಿದ ಮಕ್ಕಳೂ ಕೃಷ್ಣನಂತೆ ಧರ್ಮ ರಕ್ಷಣೆ ಮಾಡುವಂತಾಗಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ನಾರಾಯಣ ನಾಯ್ಕ್ ವಹಿಸಿದ್ದರು. ಬಾಲಗೋಕುಲ ಶೋಭಾಯಾತ್ರೆ ಸಮಿತಿಯ ಅಧ್ಯಕ್ಷ ಸುಂದರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭುವನೇಶ್ವರಿ ಸ್ವಾಗತಿಸಿ, ಉಮೇಶ ಮಾಸ್ತರ್ ವಂದಿಸಿದರು. ಪುಷ್ಪರಾಜ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು. ಬಾಯಾರು ಮುಳಿಗದ್ದೆಯಿಂದ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ನಡೆದ ಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ಬಾಯಾರಿನ ವಿವಿಧ ಬಾಲಗೋಕುಲಗಳ ಸುಮಾರು 107 ಮಕ್ಕಳು ಭಾಗವಹಿಸಿದ್ದರು.



