ಚೆರ್ಕಳ ಕಲ್ಲಡ್ಕ ರಸ್ತೆಯ ಕರಿಂಬಿಲದ ಗುಡ್ಡ ಕುಸಿತದಿಂದ ಉಂಟಾದ ಸಾರಿಗೆ ಅಡಚಣೆ ನಿವಾರಣೆಗೆ ಆಗ್ರಹ
ಬದಿಯಡ್ಕ: ಬದಿಯಡ್ಕ ಪೆರ್ಲ ರಸ್ತೆಯ ಕರಿಂಬಿಲದಲ್ಲಿ ಗುಡ್ಡಕುಸಿತಗೊಂಡ ಪರಿಣಾಮ ಉಂಟಾದ ಸಾರಿಗೆ ಅಡಚಣೆಯನ್ನು ನಿವಾರಿಸಲು ಅಗತ್ಯಕ್ರಮಕೈಗೊಳ್ಳದಿರುವುದರ ವಿರುದ್ಧ ಬದಿಯಡ್ಕ ಮುಖ್ಯ ವೃತ್ತದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆಯನ್ನು ನಡೆಸಲಾಯಿತು. ವಿವಿಧ ಪಕ್ಷಗಳ, ಸಂಘಟನೆಗಳ ನೇತಾರರು ಹಾಗೂ ಶಾಲೆಗಳ ಅಧಿಕೃತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬಿ. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಇದ್ದೂ ಇಲ್ಲದಂತಾಗಿದೆ. ಕೇರಳ ಹಾಗೂ ಕರ್ನಾಟಕಕ್ಕೆ ಅನಾದಿಕಾಲದಿಂದಲೂ ಸಂಪರ್ಕ ಕಲ್ಪಿಸಿದ ರಸ್ತೆ ಇದಾಗಿದೆ. ಜಾನುವಾರುಗಳು ಸಂಚರಿಸುತ್ತಿದ್ದ ದಾರಿಯು ಅಂತಾರಾಜ್ಯ ರಸ್ತೆಯಾಗಿ ಮಾರ್ಪಟ್ಟು ಊರಿನ ಅಭಿವೃದ್ಧಿಗೆ ಸಹಕಾರಿಯಾದರೂ ಆಡಳಿತ ವರ್ಗದ ನಿಷ್ಕ್ರಿಯತೆ ಇಲ್ಲಿ ಎದ್ದು ಕಾಣುತ್ತಿದೆ. ಕುಸಿದ ರಸ್ತೆಯ ಕಾಮಗಾರಿ ಪ್ರಕ್ರಿಯೆಯು ಯಾವುದೇ ಪುರೋಗತಿಯನ್ನು ಕಾಣದಿರುವುದರಿಂದ ವ್ಯಾಪಾರಿಗಳು ಪ್ರತಿಭಟನೆಗಿಳಿಯಬೇಕಾಯಿತು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರಹೋರಾಟವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಮಾತುಗಳನ್ನು ಅವರು ಹೇಳಿದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಊರಿನ ಜನರ ಹಾಗೂ ವ್ಯಾಪಾರಿಗಳ ಮನವಿಗೆ ಬೆಲೆನೀಡದೆ ಅಧಿಕಾರಿ ವರ್ಗ ನಿದ್ರಿಸುತ್ತಿದ್ದರೆ ಅದಕ್ಕೆ ತಕ್ಕ ಬೆಲೆತೆರಬೇಕಾದೀತು ಎಂದರು.
ದಿನನಿತ್ಯ 200ಕ್ಕಿಂತಲೂ ಹೆಚ್ಚು ನಮ್ಮ ಶಾಲೆಯ ವಿದ್ಯಾರ್ಥಿಗಳು ರಸ್ತೆತಡೆಯಿಂದಾಗಿ ಸಂಕಷ್ಟವನ್ನನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ನವಜೀವನ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ ತಿಳಿಸಿದರು. ಬದಿಯಡ್ಕ ಸರ್ಕಾರಿ ಹೈಸ್ಕೂಲ್‍ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಡುವನ್ ಕುಂಞÂ ಮಾತನಾಡಿ ಬದಿಯಡ್ಕದಿಂದ ಪೆರ್ಲಕ್ಕೆ ತೆರಳಲು ಸ್ವಾತಂತ್ರ್ಯವಿಲ್ಲದಾಗಿದೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾ ಕಾಸರಗೋಡಿನಲ್ಲಿ ಮಾತ್ರ ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೇ ಜನರಿಗೆ ದ್ರೋಹವೆಸಗುತ್ತಿದ್ದಾರೆ ಎಂದರು. ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ ಮಾತನಾಡಿ ಅಧಿಕಾರಿ ವರ್ಗದ ಅನಾಸ್ಥೆಯಿಂದಾಗಿ ವಿದ್ಯಾರ್ಥಿಗಳು ಸಹಿತ ಅನೇಕರು ತೊಂದರೆಗೊಳಗಾಗಿದ್ದಾರೆ. ತಾತ್ಕಾಲಿಕ ಪರಿಹಾರವನ್ನು ಕಂಡುಕೊಂಡು ಕೂಡಲೇ ರಸ್ತೆ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಅವರು ತಿಳಿಸಿದರು. ವಿವಿಧ ಶಾಲೆಗಳ ಅಧಿಕೃತರುಗಳಾದ ಜಯಪ್ರಕಾಶ ಪಜಿಲ, ನೌಶಾದ್, ಪ್ರಭಾವತಿ ಕೆದಿಲಾಯ ಪುಂಡೂರು, ಬ್ಲೋಕ್ ಪಂ.ಸದಸ್ಯ ಅವಿನಶ್ ರೈ, ಗ್ರಾ.ಪಂ.ಸದಸ್ಯ ವಿಶ್ವನಾಥ ಪ್ರಭು, ವನಿತಾ ವಿಂಗ್ ಅಧ್ಯಕ್ಷೆ ನಿರುಪಮಾ ಶೆಣೈ, ಬಿ.ಎನ್.ನರೇಂದ್ರ, ರವಿ ಎಂ., ದಿವಾಕರ ಶೆಣೈ, ಅಟೋ ಚಾಲಕರು, ಊರವರು, ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

