ಮಂಜೇಶ್ವರ: ಮೈ ಕಮ್ಯೂನಿಟಿ ಫೌಂಡೇಶನ್ ಸಭೆಯು ಸಂಸ್ಥೆಯ ಕಛೇರಿಯಲ್ಲಿ ಅಧ್ಯಕ್ಷ ಅಶ್ರಫ್ ಅಬ್ಬಾಸ್ ಕುಂಜತ್ತೂರು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಾಮಾಜಿಕ ಕ್ಷೇತ್ರದ ಅಭಿವೃದ್ದಿ ಬಗ್ಗೆ ಚರ್ಚಿಸಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ವೈದ್ಯಕೀಯ ಧನ ಸಹಾಯ, ಮಾಸಿಕ ಪಡಿತರ ಕಿಟ್ ವಿತರಣೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳಿಗೆ ಶಿಬಿರ, ಮನೆಪಾಠ, ಸರ್ಕಾರಿ ಸವಲತ್ತು, ಮಾಹಿತಿ ಕೇಂದ್ರ ಸಹಿತ ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. 2019-2020 ನೇ ಸಾಲಿನ ಯೋಜನೆಯಾಗಿ 10 ಅರ್ಹ ಬಡ ಕುಟುಂಬವನ್ನು ಆಯ್ಕೆ ಮಾಡಿ ಬೈತುಲ್-ಹಮ್ದ್ ಎಂಬ ನಾಮಕರಣದೊಂದಿಗೆ ಮನೆ ನಿರ್ಮಿಸಿಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಮನೆ ನಿರ್ಮಾಣಕ್ಕಾಗಿ 40 ಸೆಂಟ್ಸ್ ಜಮೀನನ್ನು ಟ್ರಸ್ಟಿಯಾದ ಇಕ್ಬಾಲ್ ಮೊಹಮ್ಮದ್ ಮೈ ಕಮ್ಯೂನಿಟಿ ಫೌಂಡೇಶನ್ ಗೆ ದಾನ ನೀಡಿದರು.
ಸಭೆಯಲ್ಲಿ ಟ್ರಸ್ಟಿಗಳಾದ ಸೂಫಿ ಮೊಹಮ್ಮದ್, ಸಯ್ಯದ್ ಅನ್ಸಾರ್ ತಂಙಳ್, ಅಮೀರ್ ಅಬ್ಬಾಸ್, ಮೊಯಿದ್ದೀನ್ ಕುಂಞ, ಇಸ್ಮಾಯಿಲ್ ಮೊಹಮ್ಮದ್, ಸಂಶೀರ್ ಮೊಹಮ್ಮದ್, ಇಕ್ಬಾಲ್ ಮೊಹಮ್ಮದ್, ಉಸ್ಮಾನ್ ಖಾದರ್, ಫಾರೂಕ್ ಅಬ್ಬಾಸ್ ಹಾಗೂ ಯೂಥ್ ವಿಂಗ್ ಅಧ್ಯಕ್ಷ ಮೊಹಮ್ಮದ್ ಶಫೀಕ್ ಭಾಗವಹಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ಮೊಯಿದ್ದೀನ್ ಕುಂಞ ಲೆಕ್ಕ ಪತ್ರ ಮಂಡಿಸಿದರು. ಶಾದ್ ಅಹ್ಮದ್ ವರದಿ ನೀಡಿದರು. ಅಬ್ದುಲ್ ರಹಿಮಾನ್ ಬಾವ ಮತ್ತು ಅಬ್ದುಲ್ ಹಮೀದ್ ಯೋಜನೆಗಳ ಬಗ್ಗೆ ಸಲಹೆಯನ್ನು ನೀಡಿದರು. ಕೋಶಾಧಿಕಾರಿ ಅಮೀರ್ ಅಬ್ಬಾಸ್ ಸ್ವಾಗತಿಸಿ, ವಂದಿಸಿದರು.


