ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಗಳು ಶ್ರೀಮಠದಲ್ಲಿ ಜುಲೈ 25 ರಿಂದ ಆರಂಭಗೊಂಡು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಸೆ. 14ರಂದು ಸೀಮೋಲ್ಲಂಘನದೊಂದಿಗೆ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂಜೆ ನಡೆದ ಸಾಂಸ್ಕøತಿಕ ಸಂಜೆಯಲ್ಲಿ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಅವರ ಹಾಡುಗಾರಿಕೆಯಲ್ಲಿ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ವಿದ್ವಾನ್ ವೇಣುಗೋಪಾಲ ಶಾನುಭೋಗ್(ವಯಲಿನ್), ವಿದ್ವಾನ್ ಅನೂರು ದತ್ತಾತ್ರೇಯ ಶರ್ಮ ಬೆಂಗಳೂರು(ಮೃದಂಗ), ವಿದ್ವಾನ್ ಅನೂರು ವಿನೋದ್ ಶಾಮ್ ಬೆಂಗಳೂರು(ತಬ್ಲಾ), ವಿದ್ವಾನ್ ರಾಜೀವ ವೆಳ್ಳಿಕ್ಕೋತ್(ಮೋರ್ಸಿಂಗ್)ನಲ್ಲಿ ಸಹಕರಿಸಿದರು.
ಬುಧವಾರ ಎಡನೀರು ಶ್ರೀಗಳ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ಇಂದು(ಗುರುವಾರ) ಎಡನೀರು ಶ್ರೀಗಳ ನಿರ್ದೇಶನದಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಸುಧನ್ವ-ವೀರವರ್ಮ ಪ್ರದರ್ಶನಗೊಳ್ಳಲಿದೆ. ಶುಕ್ರವಾರ ಸಂಜೆ ಎಡನೀರು ಶ್ರೀಗಳಿಂದ ಭಜನ್ ಸಂಧ್ಯಾ ನಡೆಯಲಿದೆ.
ಸೆ.14 ರಂದು ಚಾತುರ್ಮಾಸ್ಯ ವ್ರತ ಮಂಗಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅಪರಾಹ್ನ 3.30ಕ್ಕೆ ಸೀಮೋಲ್ಲಂಘನ, ಮಂತ್ರಾಕ್ಷತೆ, ರಾತ್ರಿ 8 ರಿಂದ ಮಹಾಪೂಜೆ, ಭಜನಾ ಮಂಗಲೋತ್ಸವ, ಗುರುವಂದನೆ, ಪ್ರಸಾದ ವಿತರಣೆ ನಡೆಯಲಿದೆ.


