ಪೆರ್ಲ: ಗಾಳಿ ಮಳೆಗೆ ಮನೆ ಮುರಿದು ಬಿದ್ದು ಟರ್ಪಾಲು ಹಾಸಿದ ಗುಡಿಸಲೊಳು ವಾಸಿಸಬೇಕಾದ ಬಡತನದ ನಿತ್ಯ ಯಾತನೆ. ಮನೆ ಯಜಮಾನನಿಗೆ ಗುಣಪಡಿಸಲಾಗದ ಅಸೌಖ್ಯದಿಂದ ಅಸುನೀಗಿದ ದುಃಖ, ಆಧಾರ ಸ್ತಂಭವಿಲ್ಲದೆ ಕಂಗಲಾದ ವೃದ್ಧರಾದ ಮಾತೆ ಹಾಗೂ ಮಹಿಳೆ, ಶಿಕ್ಷಣದಿಂದ ವಂಚಿತಳಾಗಿ ಉಳಿಯುವ ಆತಂಕದಲ್ಲಿರುವ ವಿದ್ಯಾರ್ಥಿನಿ...ಹೀಗೆ ಸಂಕಷ್ಟಗಳ ಸರಮಾಲೆಯನ್ನು ಹೆಗಲಿಗೇರಿಸಿಕೊಂಡ ಬಡ ಕುಟುಂಬವೊಂದು ಬದುಕಲು ದಾರಿ ಕಾಣದೆ ಕಂಗಲಾದ ಕತೆಯೊಂದು ಇಲ್ಲಿದೆ.
ಎಣ್ಮಕಜೆ ಗ್ರಾ.ಪಂ.ನ ಬಣ್ಪುತ್ತಡ್ಕ ಸಮೀಪದ ರಂಗೋಚಿ ಎಂಬಲ್ಲಿ ವಾಸಿಸುವ ಪರಿಶಿಷ್ಟ ಜಾತಿಗೊಳಪಟ್ಟ ಕುಟುಂಬವೊಂದು ಇದೀಗ ಆಧಾರ ಸ್ತಂಭವಿಲ್ಲದೆ ಕಂಗಲಾಗಿದೆ. ಇಲ್ಲಿನ ಚೋಮ-ಚೋಮರು ಎಂಬವರ ಪುತ್ರನಾದ ಸಂಜೀವ (46) ಕಳೆದ ಗುರುವಾರ (ಸೆ.12) ಕ್ಷಯರೋಗ ಪೀಡಿತರಾಗಿ ಅಸು ನೀಗುವುದರೊಂದಿಗೆ ಈ ಬಡ ಕುಟುಂಬದ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಕೂಲಿ ಕಾರ್ಮಿಕನಾಗಿದ್ದ ಸಂಜೀವನಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ಷಯರೋಗ ಬಾಧಿಸಿದ್ದು ಎರಡು ದಿನಗಳ ಹಿಂದೆ ಅಸೌಖ್ಯ ಉಲ್ಭಣಾವಸ್ಥೆಯಲ್ಲಿ ಸಾವನ್ನಪ್ಪಿದ್ದರು. ಈ ನಡುವೆ ಇವರ ಮನೆಯು ಕಳೆದ ಜುಲೈ ತಿಂಗಳಲ್ಲಿ ಬೀಸಿದ ಗಾಳಿ ಮಳೆಗೆ ಸಂಪೂರ್ಣ ಧರಶಾಯಿಯಾಗಿದ್ದು ಸಂಜೀವರ ತಾಯಿ,ಪತ್ನಿ ಲಕ್ಷ್ಮಿ,ಮಗಳು ವಿನುತಾ ಮನೆ ಪಕ್ಕದಲ್ಲಿಯೇ ಟರ್ಪಾಲು ಹಾಸಿದ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಇದೀಗ ಇವರೆಲ್ಲರ ಆಧಾರವಾಗಿದ್ದ ಸಂಜೀವರು ಮರಣವನ್ನಪ್ಪುದರೊಂದಿಗೆ ಸಂಸಾರದ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ತಲುಪಿದೆ. ಪ್ರಾಯಸ್ಥರಾದ ಚೋಮಾರು ಹಾಗೂ ಲಕ್ಷ್ಮಿಯ ಜೊತೆ ವಿದ್ಯಾರ್ಥಿಯಾದ ವಿನುತಾಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕಳೆದ ಹಲವಾರು ವರ್ಷಗಳ ಹಿಂದೆ ಗ್ರಾಮ ಪಂಚಾಯತಿ ಮಂಜೂರುಗೊಳಿಸಿದ ಮನೆ ಇದೀಗ ಸಂಪೂರ್ಣ ಮುರಿದು ಬಿದ್ದಿದ್ದು ಕುಟುಂಬ ಪೋಷಣೆಗೆ ಆರ್ಥಿಕ ಸಹಾಯ ಸಹಕಾರಗಳು ಇವರಿಗೆ ಅತ್ಯಗತ್ಯವಾಗಿದೆ. ಸಂಕಷ್ಟಕ್ಕೆ ಸ್ಪಂದಿಸುವ ಸಹೃದಯರು, ಸಂಘ ಸಂಸ್ಥೆಗಳು,ಸರ್ಕಾರ ಈ ಬಡ ಕುಟುಂಬದ ಬಗ್ಗೆ ಕರುಣಾ ದೃಷ್ಟಿ ಬೀರಬಹುದೇ ಎಂಬ ನಿರೀಕ್ಷೆ ಇವರದ್ದಾಗಿದೆ.


