ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. "ಏನಕ್ಕೆ"ನ (!?) ಪ್ರಕಾರೇಣ...
“ಆಸ್ತಿ ಮಾಡಲ್ಲ ಅಂದಮೇಲೆ ರಾಜಕೀಯಕ್ಕೆ ಏನಕ್ಕೆ ಬರಬೇಕು?", "ನಗುವುದು ಏನಕ್ಕೆ ಒಳ್ಳೆಯದು?", "ಕೆಲವರಿಗೆ ದೀಪಾವಳಿ ಏನಕ್ಕೆ ಆಚರಿಸುತ್ತಾರೆ ಎಂಬುದೇ ಗೊತ್ತಿಲ್ಲ!", "ಮೋದಿ ಮತ್ತೊಮ್ಮೆ ಏನಕ್ಕೆ ಬೇಕು?", "ಮನೆ ಮುಂದೆ ರಂಗೋಲಿ ಏನಕ್ಕೆ ಹಾಕ್ತಾರೆ?" ... ಫೇಸ್‌ಬುಕ್ ಗೋಡೆಯಿಂದ ಎತ್ತಿಕೊಂಡಿರುವ ಈ ಎಲ್ಲ ವಾಕ್ಯಗಳಲ್ಲಿನ ‘ಏನಕ್ಕೆ’ ಎಂಬ ಪದ ಕನ್ನಡ ಭಾಷೆಗೆ ಬೆಂಗಳೂರಿಗರ ಕೊಡುಗೆ. ಪ್ರಾದೇಶಿಕವಾಗಿ, ಆಡುಭಾಷೆಯಲ್ಲಷ್ಟೇ ಬಳಕೆಯಾಗುತ್ತಿದ್ದರೆ ಇಲ್ಲಿ ಸ್ವಚ್ಛ ಭಾಷೆ ಕಲಿಕೆಯ ಟಿಪ್ಪಣಿಯಾಗಿ ಇದನ್ನು ಆಯ್ದುಕೊಳ್ಳುತ್ತಿರಲಿಲ್ಲ. ಆದರೆ ಶಿಷ್ಟ ಬರವಣಿಗೆಯಲ್ಲೂ ಇತ್ತೀಚೆಗೆ ಇದು ಹೆಚ್ಚುಹೆಚ್ಚು ನುಸುಳುತ್ತಿರುವುದರಿಂದ ಶುದ್ಧರೂಪದ ಪದ ಅಲ್ಲವಿದು ಎಂದು ತಿಳಿಸಲಿಕ್ಕೆ ಈ ಟಿಪ್ಪಣಿ. ‘
ಏನಕ್ಕೆ’ಯ ಜಾಗದಲ್ಲಿ ನಿಜವಾಗಿ ಇರಬೇಕಾದದ್ದು ‘ಏಕೆ’ ಅಥವಾ ‘ಯಾಕೆ’. ದಾಸರ ಪದಗಳಲ್ಲಿ, ಜನಪದ ಹಾಡುಗಳಲ್ಲಿ ‘ಏತಕ್ಕೆ’, ‘ಯಾತಕ್ಕೆ’ ಮುಂತಾದ ರೂಪಗಳೂ ಬಳಕೆಯಾಗಿವೆ.
‘ಏನಕ್ಕೆ’ ಬೆಂಗಳೂರಿಗರ ಬುರುಡೆಯಲ್ಲಿ ಭದ್ರವಾಗಿ ನೆಲೆಗೊಳ್ಳುವುದಕ್ಕೆ ಖ್ಯಾತ ‘ಪನ್’ಡಿತ ಪತ್ರಕರ್ತ ವೈಎನ್ಕೆ ಅವರ "ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡುವುದು ಏನಕೆ? ಆಸ್ಕ್ ಮಿಸ್ಟರ್ ವೈಎನ್ಕೆ!" ಚುಟುಕ ಸಹ ಒಂದು ಕಾರಣವಿರಬಹುದು.
ಅಥವಾ, “Why?" ಎಂದು ಕೇಳುವುದು ಹಳೇ ಫ್ಯಾಷನ್ನು. "What for?" ಎಂದು ಕೇಳಿದರೆ ಹೊಸ ಸ್ಟೈಲು. ಇಂಗ್ಲಿಷ್ನಲ್ಲಿ ಆಲೋಚಿಸಿ ಕನ್ನಡದಲ್ಲಿ ಮಾತಾಡುವ ಕೆಲವು ಬೆಂಗಳೂರಿಗರು "What for?" ಅಂತನ್ನುವುದನ್ನೇ "ಏನಕ್ಕೆ" ಎನ್ನುವರು. :-)
====
೨. "ಯೇನ ಕೇನ" ಪ್ರಕಾರೇಣ...
‘ಏನಕ್ಕೆ’ ಅಥವಾ ‘ಏನಕೆ’ಗಳಂತೆಯೇ ಇನ್ನೊಂದು ತಪ್ಪು ಬಳಕೆ ‘ಏನಕೇನ’ ಎಂಬುದು. ಸಂಸ್ಕೃತ ಸುಭಾಷಿತವೊಂದರಿಂದ ಎರವಲು ಪಡೆದ ತುಣುಕಿನ ಅಪಭ್ರಂಶ. ಆ ಸುಭಾಷಿತದ ಪೂರ್ಣರೂಪ ಹೀಗಿದೆ:
ಘಟಂ ಭಿಂದ್ಯಾತ್ಪಟಂ ಛಿಂದ್ಯಾತ್ಕುರ್ಯಾದ್ರಾಸಭರೋಹಣಮ್|
ಯೇನ ಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವೇತ್||
[ಘಟಂ = ಮಡಕೆಯನ್ನು; ಭಿಂದ್ಯಾತ್ = ಒಡೆಯಬಹುದು; ಪಟಂ = ಬಟ್ಟೆಯನ್ನು; ಛಿಂದ್ಯಾತ್ = ಹರಿಯಬಹುದು; ರಾಸಭರೋಹಣಮ್ = ಕತ್ತೆಸವಾರಿ; ಕುರ್ಯಾತ್ = ಮಾಡಬಹುದು. ಯೇನ ಕೇನ = ಯಾವುದಾದರೂ; ಪ್ರಕಾರೇಣ = ವಿಧದಿಂದ; ಪ್ರಸಿದ್ಧಃ ಪುರುಷೋ ಭವೇತ್ = ಪ್ರಸಿದ್ಧ ವ್ಯಕ್ತಿಯಾಗಬಹುದು.]
ಭಾವಾರ್ಥ: ಹೆಚ್ಚು ಜನರು ಸೇರಿರುವಲ್ಲಿ ಹಠಾತ್ತಾಗಿ ಒಂದು ದೊಡ್ಡ ಮಡಕೆಯನ್ನು ಠಪ್ಪೆಂದು ಒಡೆದುಹಾಕುವುದು, ಅಥವಾ, ಉಟ್ಟುಕೊಂಡ ಪಂಚೆಯನ್ನೇ ಫಟೀರ್ ಎಂದು ಹರಿಯುವುದು, ಅಥವಾ ರಾಜಮಾರ್ಗದಲ್ಲಿ ಕತ್ತೆಯ ಮೇಲೆ ಸವಾರಿ ಹೊರಡುವುದು... ಹೀಗೆ ವಿಚಿತ್ರವಾದ ಕೆಲಸಗಳನ್ನು ಮಾಡಿ ಜನರ ಗಮನವನ್ನು ತನ್ನತ್ತ ಸೆಳೆಯುವವರು (attention drawing techniques ಬಳಸುವವರು) ಕೆಲವರು ಇರುತ್ತಾರೆ. ಅವರಿಗೆ ಸಮಾಜಮುಖಿ ಒಳ್ಳೆಯ ಕೆಲಸ ಮಾಡಬೇಕೆಂಬ ಯಾವ ಉದ್ದೇಶವೂ ಇರುವುದಿಲ್ಲ, ಬಹುತೇಕವಾಗಿ ಅಂತಹ ಸಾಮರ್ಥ್ಯ ಮತ್ತು ಪ್ರತಿಭೆಗಳೂ ಇರುವುದಿಲ್ಲ. ಹೇಗಾದರೂ ಮಾಡಿ (by hook or crook ಎನ್ನುವಂತೆ) ಪ್ರಸಿದ್ಧರಾಗಬೇಕು, ಜನರು ತನ್ನನ್ನು ಗುರುತಿಸಬೇಕು, ತಾನು ಹೇಳಿದಂತೆ ಸಮಾಜ ನಡೆಯಬೇಕು ಎಂಬ ಹಪಹಪಿ ಮಾತ್ರ ಕಂಠಮಟ್ಟ ಇರುತ್ತದೆ. ಈಗಿನ ದಿನಗಳಲ್ಲಿ ಕಾಸಿಗೊಂದು ಕೊಸರಿಗೆರಡು ಎಂಬಂತೆ ಅಲ್ಲಲ್ಲಿ ಕಾಣಸಿಗುವ ಭೂಮಿಭಾರದ ‘ಬುಜೀ’ಗಳು (ಬುದ್ಧಿ ಇಲ್ಲದ ಜೀವಿಗಳು) ಇದೇ ವರ್ಗದವು.
ಸಂಸ್ಕೃತ ಸುಭಾಷಿತದಲ್ಲಿನ "ಯೇನ ಕೇನ ಪ್ರಕಾರೇಣ" ಎಂಬ ಭಾಗವನ್ನು ಕನ್ನಡದಲ್ಲಿ ಭಾಷಣ/ಲೇಖನಗಳಲ್ಲಿ ಉದ್ಧರಿಸುವಾಗ ಕೆಲವರು "ಏನಕೇನ ಪ್ರಕಾರೇಣ" ಎಂದು ತಪ್ಪಾಗಿ ಹೇಳುತ್ತಾರೆ/ಬರೆಯುತ್ತಾರೆ. ಅದು ‘ಏನಕೇನ’ ಅಲ್ಲ, "ಯೇನ ಕೇನ" ಆಗಬೇಕು. ಯಥಾ-ತಥಾ (“ಯಥಾ ರಾಜಾ ತಥಾ ಪ್ರಜಾಃ": ಚಾಣಕ್ಯನೀತಿ), ಯದಾ-ತದಾ ("ಯದಾ ಯದಾ ಹಿ ಧರ್ಮಸ್ಯ...ತದಾತ್ಮಾನಂ ಸೃಜಾಮ್ಯಹಂ": ಭಗವದ್ಗೀತೆ), ಯಾನಿ-ಕಾನಿ ("ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ": ದೇವರಿಗೆ ಪ್ರದಕ್ಷಿಣೆ ಹಾಕುವಾಗಿನ ಶ್ಲೋಕ), ಯದ್ವಾ-ತದ್ವಾ ("ಸ್ಟಾರ್ ನಟನ ಪುತ್ರನಿಂದ ಯದ್ವಾ ತದ್ವಾ ಕಾರು ಚಾಲನೆ" ಸುದ್ದಿ ತಲೆಬರಹ) ಮುಂತಾದುವುಗಳಂತೆಯೇ ಯೇನ-ಕೇನ. ಇವುಗಳಿಗೆ ವ್ಯಾಕರಣದಲ್ಲಿ ‘ನಿತ್ಯಸಂಬಂಧಿ ಅವ್ಯಯಗಳು’ ಎಂದು ಹೆಸರು.
ಅಂದಹಾಗೆ "ಯೇನ ಕೇನ"ವು ‘ಏನಕೇನ’ ಎಂದು ರೂಢಿಯಾಗುವುದಕ್ಕೆ ಖ್ಯಾತ ಸಾಹಿತಿ ಎನ್.ಕೆ.ಕುಲಕರ್ಣಿ (ಕಾವ್ಯನಾಮ: ‘ಎನ್ಕೆ’) ಅವರು ಬರೆಯುತ್ತಿದ್ದ ಹರಟೆ ಅಂಕಣ “ಎನ್ಕೇನ ಪ್ರಕಾರೇಣ" ಸಹ ಒಂದು ಕಾರಣವಿರಬಹುದು!
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಯಃಕಶ್ಚಿತ್ ಸರಿ. (ಯಾವುದೋ ಒಂದು, ಯಾವನೋ ಒಬ್ಬ, ಯಾವಳೋ ಒಬ್ಬಳು... ಅಂತ ಹೇಳುವಲ್ಲಿನ ಅರ್ಥ). ಯಕ್ಕಶ್ಚಿತ್, ಯಕಶ್ಚಿತ್, ಯಕಃಚಿತ್ ಎಂದೆಲ್ಲ ಬರೆದರೆ ತಪ್ಪು.
ಆ) ದ್ರಷ್ಟಾರ ಸರಿ. (ಆತ್ಮತತ್ತ್ವವನ್ನು ಕಂಡುಕೊಂಡವನು, ಸಾಕ್ಷಾತ್ಕಾರ ಪಡೆದುಕೊಂಡವನು ಎಂಬ ಅರ್ಥ. Visionary ಎಂಬರ್ಥದಲ್ಲೂ ಬಳಕೆಯಾಗುತ್ತದೆ). ದೃಷ್ಟಾರ ಎಂದು ಬರೆದರೆ ತಪ್ಪು. ಆದರೆ ದೃಷ್ಟಿ, ದೃಷ್ಟಾಂತ ಮುಂತಾದ ಪದಗಳಲ್ಲಿ "ದೃ" ಅಕ್ಷರವೇ ಇರುವುದೆಂದು ಗಮನಿಸಬೇಕು.
ಇ) ಗಂಡಭೇರುಂಡ ಸರಿ. (ಕರ್ನಾಟಕ ರಾಜ್ಯ ಲಾಂಛನದಲ್ಲಿರುವ ಇತ್ತಲೆ ಹಕ್ಕಿ. ಭೇರುಂಡ ಎನ್ನುವುದು ಸಂಸ್ಕೃತ ಪದ). ಗಂಡಬೇರುಂಡ ಎಂದು ಬರೆದರೆ ತಪ್ಪು. “ಗಂಡ ಬೇರೆ ಉಂಡ" ಎಂದು ತಮಾಷೆಗಷ್ಟೇ ಬರೆಯಬಹುದು :-)
ಈ) ವಿಶ್ವಸನೀಯ ಸರಿ. (ನಂಬಿಕೆಗೆ ಅರ್ಹವಾದುದು,ವಿಶ್ವಾಸಕ್ಕೆ ಪಾತ್ರವಾದುದು ಎಂಬ ಅರ್ಥ). ವಿಶ್ವಾಸನೀಯ ಎಂದು ಬರೆದರೆ ತಪ್ಪು.
ಉ) "ಭೇದಿ ಎಂಬ ಬಾಧೆ ತಟ್ಟದಂತೆ ಭೇದ ಇಲ್ಲದೆ ಬುಧವಾರ ಬೋಧನೆ ಮಾಡಬೇಕು". ಇಲ್ಲದಿದ್ದರೆ ಆ ಎಲ್ಲ ಪದಗಳಲ್ಲೂ ಎಷ್ಟೆಲ್ಲ ತಪ್ಪುಗಳಾಗುತ್ತವೆ!!
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ
===========



