HEALTH TIPS

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ- ಕಾಸರಗೋಡಿನಲ್ಲಿ ಕನ್ನಡ ಚಿರಂಜೀವಿ : ಬಾಲಕೃಷ್ಣ ಅಗ್ಗಿತ್ತಾಯ


      ಮಧೂರು: ಕಾಸರಗೋಡಿನ ಕನ್ನಡ ರಂಗಭೂಮಿ, ಸಾಹಿತ್ಯ ಮೊದಲಾದ ಪ್ರಕಾರಗಳಿಗೆ ಗಾಢ ಇತಿಹಾಸವಿದೆ. ಇದು ಗಟ್ಟಿಯಾದ ಕನ್ನಡ ಸಾಹಿತ್ಯ. ಸಾಹಿತ್ಯವು ಮಾನಸಿಕ ಸಮಾಧಾನ ನೀಡುತ್ತದೆ. ಕಾಸರಗೋಡಿನಲ್ಲಿ ಯಾವುದೇ ಶಕ್ತಿಗೆ ಕನ್ನಡ ಭಾಷೆಯ ದಮನ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕನ್ನಡ ಚಿರಂಜೀವಿ. ಚುಟುಕು ಸಾಹಿತ್ಯಕ್ಕೆ ಪ್ರಾಸಬದ್ಧತೆಯೇ ಜೀವಾಳವಾಗಿದ್ದು, ವ್ಯಾಕರಣ ಬದ್ಧತೆಯ ಚೌಕಟ್ಟು ಅನಿವಾರ್ಯವಲ್ಲ. ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಇದರಿಂದ ಕನ್ನಡದ ಶಕ್ತಿ ವೃದ್ಧಿಸುತ್ತದೆ  ಎಂದು ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಹೇಳಿದರು.
     ಅವರು ಕಾಸರಗೋಡು ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಸೆ.29ರಂದು ಕಾಸರಗೋಡು ಜಿಲ್ಲಾ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ 5ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಭಾನುವಾರ ಸಂಜೆ ನಡೆದ ಲಾಂಛನ ಬಿಡುಗಡೆ, ಸಿದ್ಧತಾ ಸಭೆ ಹಾಗೂ ಹಾಸ್ಯ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
       ಚುಟುಕು ಗೋಷ್ಠಿಯನ್ನು ಉದ್ಘಾಟಿಸಿದ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡವನ್ನು ಮುಂದಿನ ತಲೆಮಾರಿಗೆ ದಾಟಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ಕನ್ನಡದ ಕಂಪು ಹರಡುವ ಶಿಬಿರಗಳನ್ನು ನಡೆಸಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಹಾಗೂ ಭಾಷಾಪ್ರೇಮ ಅರಳಿಸುವುದರಿಂದ ಮುಂದಿನ ಒಂದು ತಲೆಮಾರಿಗೆ ಕನ್ನಡವನ್ನು ಶಕ್ತವಾಗಿ ದಾಟಿಸಿದಂತಾಗುತ್ತದೆ. ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳೂ ಕೂಡಾ ಒಂದೇ ಮನಸ್ಥಿತಿಯಲ್ಲಿ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡಿದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು. ಪ್ರಸ್ತುತ ಎಲ್ಲಾ ಕನ್ನಡ ಸಂಘಟನೆಗಳೂ ಕೂಡಾ ಏಕಾಂಗಿಯಾಗಿ ಪ್ರತ್ಯಪ್ರತ್ಯೇಕವಾಗಿ ಹೋರಾಟ ಮಾಡುವುದರಿಂದ ನಿರೀಕ್ಷಿಸಿದ ಫಲಿತಾಂಶ ಪಡೆಯಲು ಕಷ್ಟವಾಗಿದೆ. ಇಂತಹಾ ಸಮ್ಮೇಳನಗಳು ಈ ಪ್ರತ್ಯೇಕತವಾದವನ್ನು ಅಳಿಸಿ, ಏಕಮನೋಭಾವವನ್ನು ಅರಳಿಸಲಿ ಎಂದು ಹೇಳಿದರು.
      ಈ ಸಂದರ್ಭದಲ್ಲಿ ನಡೆದ ಚುಟುಕು ಹಾಸ್ಯ ಕವಿಗೋಷ್ಠಿಯಲ್ಲಿ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ಸಾಹಿತಿಗಳಾದ ವಿರಾಜ್ ಅಡೂರು, ರಾಮಕೃಷ್ಣ ನಡುಬೆಟ್ಟು, ಪ್ರಭಾವತಿ ಕೆದಿಲಾಯ ಪುಂಡೂರು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಕೆ.ನರಸಿಂಹ ಭಟ್ ಏತಡ್ಕ, ಸೌಮ್ಯ ಗುರು ಕಾರ್ಲೆ, ಪುರುಷೋತ್ತಮ ಭಟ್ ಪುದುಕೋಳಿ, ರಿತೇಶ್ ಕಿರಣ್ ಕಾಟುಕುಕ್ಕೆ, ಚಂದ್ರಿಕಾ ಶೆಣೈ ಮುಳ್ಳೇರಿಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕೋಟೆಕಣಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸುಭಾಶ್ ಪೆರ್ಲ, ಪುರುಷೋತ್ತಮ ನಾೈಕ್, ದಯಾನಂದ ಬೆಳ್ಳೂರಡ್ಕ, ಶೇಖರ, ಯೋಗೀಶ್ ಕೋಟೆಕಣಿ, ಕುಶಲ ಪಾರೆಕಟ್ಟೆ, ಸತೀಶ್ ಕೂಡ್ಲು, ಸತ್ಯನಾರಾಯಣ, ಶ್ರೀಕಾಂತ್ ಕಾಸರಗೋಡು, ಸುಭಾಶ್ ಪೆರ್ಲ  ಮೊದಲಾದವರು ಭಾಗವಹಿಸಿದ್ದರು. ದಿವಾಕರ ಅಶೋಕನಗರ, ಕಾವ್ಯಕುಶಲ ಕನ್ನಡ ಹಾಡುಗಳನ್ನು ಹಾಡಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಮ್ಮೇಳನದಲ್ಲಿ ಕಾಸರಗೋಡು ದಸರಾ ನಾಡಹಬ್ಬ ಆಚರಣೆಗೆ ಚಾಲನೆ, ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ನಾಡಿನ ವಿವಿಧ ಕಲಾವಿದರಿಂದ ಕಲಾ ಪ್ರದರ್ಶನ, ಲೇಖಕರಿಂದ ಪುಸ್ತಕ ಪ್ರದರ್ಶನ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಸಾಧಕರಿಗೆ ಗೌರವ ಪ್ರಶಸ್ತಿ, ಜಿಲ್ಲಾ ಮಟ್ಟದ ಮಕ್ಕಳ ಕಾವ್ಯಸೌರಭ, ಅಂತರ್‍ರಾಜ್ಯ ಕಾವ್ಯ ಸಂಭ್ರಮ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಸಮ್ಮೇಳನದ ಪ್ರಚಾರ ಫಲಕಗಳನ್ನು ಕಾಸರಗೋಡು ನಗರಸಭೆ ಕೌನ್ಸಿಲರ್ ಕೆ.ಶಂಕರ್ ಬಿಡುಗಡೆ ಮಾಡಿದರು. ಜಗದೀಶ್ ಕೂಡ್ಲು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ ಪ್ರೇಮಿಗಳು ಅನೇಕ ಮಂದಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries