ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ನವ ನಿರ್ಮಾಪಕ ಹಾಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಸಹಕಾರಿ ರಂಗಗಳ ಧುರೀಣ ದಿ.ಖಂಡಿಗೆ ಶಾಮ ಭಟ್ ಜನ್ಮಶತಮಾನೋತ್ಸವ ಸಮಾರಂಭವು ಸೆ.29ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಬುಧವಾರ ಅಪರಾಹ್ನ ಜರಗಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕುಗ್ರಾಮವಾಗಿದ್ದ ನೀರ್ಚಾಲು ಪ್ರದೇಶವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಚೇತನ ದಿ.ಖಂಡಿಗೆ ಶಾಮ ಭಟ್ ಅವರ ಅತ್ಯಪೂರ್ವ ಸಾಧನೆಗಳು ಇಂದಿಗೂ ಮಾದರಿಯಾದುದಾಗಿದೆ. ವಿದ್ಯಾಭ್ಯಾಸ, ಸಹಕಾರ, ಕೃಷಿ, ಸಂಘಟನೆ, ಧಾರ್ಮಿಕ-ಸಾಮಾಜಿಕ ಕ್ರಾಂತಿಗೆ ಭದ್ರಬುನಾದಿಯೊದಗಿಸಿದ್ದ ಹಿರಿಯ ಚೇತನಗಳ ಸ್ಮರಣೆ ನಮ್ಮಲ್ಲಿ ನವಚೇತನ ಮೂಡಿಸುವುದು. ಜನ್ಮಶತಮಾನೋತ್ಸವ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಅವರಿಗೆ ನಾವು ಗೌರವವನ್ನು ಸಲ್ಲಿಸಬೇಕು ಎಂದರು.
ಗ್ರಾ.ಪಂ.ಸದಸ್ಯ ಶಂಕರ ಡಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಖೆಗಳ ಬಗ್ಗೆ ಮಾಹಿತಿ ನೀಡಿದರು. ಜನಪ್ರತಿನಿಧಿಗಳಾದ ಡಿ.ಶಂಕರ, ಪ್ರೇಮ ಕುಮಾರಿ, ಸಿರಾಜ್ ಮುಹಮ್ಮದ್, ಕರ್ನಾಟಕ ಬ್ಯಾಂಕ್ ಪ್ರಬಂಧಕ ಅನಂತಕೃಷ್ಣ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಉಪಸ್ಥಿತರಿದ್ದರು. ಇದೇ ಸಂದರ್ಭ ಜನ್ಮಶತಮಾನೋತ್ಸವ ಸಮಿತಿಯ ಅವಲೋಕನ ಸಭೆ ನಡೆಯಿತು. ವಿವಿಧ ವಿಭಾಗಗಳ ಜವಾಬ್ದಾರಿಯನ್ನು ವಹಿಸಿಕೊಂಡವರು ಸವಿವರಗಳನ್ನು ನೀಡಿದರು. ಅಧ್ಯಾಪಿಕೆ ಶೈಲಜಾ ಪ್ರಾರ್ಥನೆಯನ್ನು ಹಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ವೆಂಕಟ್ರಾಜ ಸಿ.ಎಚ್. ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಶಿವಪ್ರಕಾಶ್ ಎಂ.ಕೆ. ವಂದಿಸಿದರು.


