ಕಾಸರಗೋಡು: ಓಣಂ ಹಬ್ಬದ ಆಚರಣೆ ಅಂಗವಾಗಿ ಕುಟುಂಬಶ್ರೀ ನಡೆಸಿದ ಮಾರಾಟ ಮೇಳಗಳಲ್ಲಿ 30 ಲಕ್ಷ ರೂ.ನ ಆದಾಯ ಗಳಿಸಿದೆ.
ಜಿಲ್ಲೆಯ 38 ಗ್ರಾಮ ಪಂಚಾಯತ್‍ಗಳಲ್ಲಿ , ಮೂರು ನಗರಸಭೆ ವ್ಯಾಪ್ತಿಗಳಲ್ಲಿ ನಡೆಸಿದ ಓಣಂ ಮಾರಾಟ ಮಳಿಗೆಗಳಲ್ಲಿ ಈ ಲಾಭ ಸಿಕ್ಕಿದೆ. ಜೈವಿಕ ತರಕಾರಿಗಳು, ಸೂಕ್ಷ್ಮ ಘಟಕಗಳ ಉತ್ಪನ್ನಗಳು, ಖಾದ್ಯ ಪದಾರ್ಥಗಳು, ಸಾಂಬಾರ ಪುಡಿಗಳು, ಪುಟ್ ಪುಡಿ, ದೋಸೆ ಪುಡಿ, ಉಪ್ಪಿನಕಾಯಿ, ಗೇರುಬೀಜ ಸಹಿತ ವೈವಿಧ್ಯಮಯ ಉತ್ಪನ್ನಗಳು ಧಾರಾಳ ಬೇಡಿಕೆ ಗಳಿಸಿದುವು. ಈ ಸಾಧನೆಗೆ ಕಾರಣಕರ್ತರಾದ ಸಿ.ಡಿ.ಎಸ್. ಗಳನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಶ್ಲಾಘಿಸಿದೆ.
ಮುಂದಿನ ಅವಲೋಕನ ಸಭೆಯಲ್ಲಿ ಅತ್ಯುತ್ತಮ ಸಾಧನೆ ನಡೆಸಿದ ಸಿ.ಡಿ.ಎಸ್.ಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು.


