ಪುಸ್ತಕ: ಕಾಮನಬಿಲ್ಲು
ಲೇಖಕರು: ಸತ್ಯವತಿ. ಎಸ್. ಭಟ್ ಕೊಳಚಪ್ಪು
ಬರಹ:ಚೇತನಾ ಕುಂಬಳೆ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 20 ನೇ ಶತಮಾನ ಅತ್ಯಂತ ವಿಶಿಷ್ಟವಾದದ್ದು. ಈ ಸಂದರ್ಭದಲ್ಲಿ ಭಾವಗೀತೆ, ಸಣ್ಣಕತೆ, ಕಾದಂಬರಿ, ನಾಟಕ ಮುಂತಾದವುಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ 'ಮಕ್ಕಳ ಸಾಹಿತ್ಯ'ವೂ ಗಮನಾರ್ಹವಾದದ್ದು. ಮಕ್ಕಳ ಸಾಹಿತ್ಯ ಎಂದರೆ, ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ". ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲೇ ಕಾಣಬಹುದು. ಕನ್ನಡದ ಪ್ರಸಿದ್ಧ ಕವಿಗಳನೇಕರು ಮಕ್ಕಳ ಮನಸ್ಸನ್ನು ಪ್ರವೇಶಿಸಿ ಅವರಿಗಿಷ್ಟವಾಗುವಂಥ ಸಾಹಿತ್ಯವನ್ನು ರಚಿಸಿದ್ದಾರೆ. ಆ ಬರಹಗಳು ಮಕ್ಕಳ ಮನೋಲೋಕವನ್ನು ಅರಳಿಸುತ್ತವೆ.
ಇತ್ತೀಚೆಗೆ ಮಕ್ಕಳ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡವರು 75ರ ಇಳಿ ಹರೆಯದಲ್ಲೂ ಎಳೆಯರೊಂದಿಗೆ ಬೆರೆಯಬಲ್ಲ ಜೀವನೋತ್ಸಾಹವನ್ನು ಉಳಿಸಿಕೊಂಡಿರುವ ಕವಯತ್ರಿ ಸತ್ಯವತಿ ಎಸ್ ಭಟ್ ಕೊಳಚಪ್ಪು. ಇವರು
ಹೈಸ್ಕೂಲು ಓದುತ್ತಿರುವಾಗಲೇ ಸಾಹಿತ್ಯಾಸಕ್ತರಾಗಿದ್ದರೂ, ಇವರ ಸಾಹಿತ್ಯ ಪ್ರತಿಭೆ ಹೊರ ಜಗತ್ತಿಗೆ ತೆರೆದುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ...
ಬಿಡುಗಡೆಯಾದ ಮೂರು ಕವನ ಸಂಕಲನಗಳಲ್ಲಿ ಎರಡು ಮಕ್ಕಳ ಸಂಕಲನಗಳು...ಇನ್ನೊಂದು ಮಕ್ಕಳ ಕವನ ಸಂಕಲನಕ್ಕೆ ತೊಡಗಿದ್ದಾರೆ.
ಇವರ ಕೆಲವು ಕವನ ಲೇಖನಗಳು ನಿಯತಕಾಲಿಕೆ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ...
ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ
ಸಾಹಿತ್ಯ ಕೃಷಿಯಲ್ಲದೆ ಸಾಹಿತ್ಯೇತರ ಕೃಷಿಗಳಾದ ತೆಂಗು ಕಂಗು ರಬ್ಬರು ಕೃಷಿಯಲ್ಲೂ ಸಾಕಷ್ಟು ಅನುಭವ ಉಳ್ಳವರು. ಜೇನು ಕೃಷಿಯಲ್ಲೂ ಪರಿಣತಿ ಇದೆ. ಈಜುವುದರಲ್ಲೂ ತುಂಬ ಆಸಕ್ತಿ. ಯೋಗ ಪ್ರಾಣಾಯಾಮ ನಿತ್ಯದ ಅಭ್ಯಾಸದೊಡನೆ, ಎಪ್ಪತ್ತೈದರ ಇಳಿ ವಯಸ್ಸಲ್ಲೂ ಆರೋಗ್ಯದಲ್ಲಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ "ಕಾಮನಬಿಲ್ಲು" ಮಕ್ಕಳ ಕವನ ಸಂಕಲನ ಜಿಲ್ಲಾ ಪರಿಷತ್ತಿನಲ್ಲಿ ಆಯ್ಕೆಗೊಂಡು ಕಲ್ಕೂರ ಪ್ರಕಾಶನದ ಮೂಲಕ ಮಂಗಳೂರು ಪುರಭವನದಲ್ಲಿ ಬಿಡುಗಡೆಯಾದದ್ದು ಸಂತಸದ ವಿಷಯ.. ಈ ಸಂಕಲನಕ್ಕೆ ಮುನ್ನುಡಿ ಬರೆದ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳುವಂತೆ, "ಮಕ್ಕಳ ಮನಸ್ಸನ್ನು ತಿದ್ದುವ,ಅವರಲ್ಲೂ ಸದಭಿರುಚಿ ನಿರ್ಮಾಣ ಮಾಡುವ , ಅವರ ಕಲ್ಪನಾ ಲೋಕವನ್ನು ವಿಸ್ತರಿಸುವ ಭಾಷಾ ಸಮೃದ್ಧಿಯೊಂದಿಗೆ ಅಭಿನಯ ಮತ್ತು ಅಭಿವ್ಯಕ್ತಿಯ ಸಾಮಥ್ರ್ಯವನ್ನು ಹೆಚ್ಚಿಸುವ ಮಕ್ಕಳ ಸಾಹಿತ್ಯವು ಚಂದದ ಮುಗ್ಧ ಲೋಕವೊಂದರ ಅನಾವರಣವಾಗಿದೆ. ಇಂತಹ ಸಾಹಿತ್ಯವನ್ನು ಬರೆಯುವ ಕವಿಗಳ ಮನಸ್ಸು ನಿಷ್ಕಲ್ಮಶವೂ ಮುಗ್ಧವೂ, ಆದ್ರ್ರವಾದ ಭಾವನೆಗಳ ಸರೋವರವೂ ಆಗಿರಬೇಕಾಗುತ್ತದೆ". ಎಂದು ಅಭಿಪ್ರಾಯಪಡುತ್ತಾರೆ. ಮಂಜೇಶ್ವರದ ರಮಾನಂದ ಬನಾರಿಯವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಇದರಲ್ಲಿ ಒಟ್ಟು 60 ಆಯ್ದ ಕವನಗಳನ್ನು ಪ್ರಕಟಿಸಲಾಗಿದೆ.
ಯಾವುದೇ ಕೆಲಸದ ಪ್ರಾರಂಭದಲ್ಲಿ ನಾವು ದೇವರನ್ನು ನೆನೆಯುವುದು ಸಹಜ. ಹಾಗೆಯೇ ಇಲ್ಲಿಯೂ ಆರಂಭದ ಕವನಗಳಲ್ಲಿ ಗಣಪತಿಯನ್ನೂ, ಹಾಗೆಯೇ ಕೃಷ್ಣನ ಬಗೆಗಿನ ದೈವ ಭಕ್ತಿಯ ಕವನಗಳಿವೆ. ಜೊತೆಗೆ, ಗುರುಹಿರಿಯರ ಮೇಲಿನ ಭಕ್ತಿ, ಗೌರವಗಳನ್ನೂ ಪ್ರತಿಪಾದಿಸುತ್ತವೆ. ಅಕ್ಷರಗಳನ್ನು ಹೇಳಿಕೊಟ್ಟು,ಓದಲು ಬರೆಯಲು ಕಲಿಸಿ, ತಿದ್ದಿ ಬೆಳೆಸುವ ನಮ್ಮ ಏಳಿಗೆಯನ್ನೆ ಬಯಸುವ 'ಗುರುಗಳ'ನ್ನು ಸ್ಮರಿಸುತ್ತಾರೆ. 'ದೇಶ ಗೌರವ', 'ರಾಷ್ಟ್ರಧ್ವಜಕೆ ವಂದನೆ', 'ಭಾರತಾಂಬೆ' ಕವಿತೆಗಳು ದೇಶ ಪ್ರೇಮವನ್ನು ಹೆಚ್ಚಿಸುತ್ತವೆ.
"ನೆತ್ತರೆಲ್ಲವ ಬಸಿದು, ಉತ್ತಮಣ್ಣಿಂಗೆರೆದು,
ಶ್ರೀಗಂಧ ಕೊರಡಂತೆ ಜೀವ ತೇದ
ಬೆವರೊಂದು ಮುತ್ತಾಗಿ, ಮುತ್ತು ತೆನೆತೆನೆಯಾಗಿ
ಉತ್ತಮದ ಬೆಳೆಬೆಳೆದು ಜನರ ಕಾಯ್ದ..." ಎನ್ನುವಲ್ಲಿ ದೇಶದ ಬೆನ್ನೆಲುಬಾದ 'ಅನ್ನದಾತ'ನ ಮಹತ್ವವನ್ನು ತಿಳಿಸುತ್ತಾರೆ. ಒಂದೆಡೆ ಸಪ್ತವರ್ಣದಿಂದ ಕೂಡಿದ, ಎಲ್ಲರ ಮನ ಸೂರೆಗೊಳಿಸುವ 'ಕಾಮನಬಿಲ್ಲಿ'ನ ವರ್ಣನೆ ಮಾಡುತ್ತಾರೆ ಮತ್ತೊಂದೆಡೆ ಹೂವಿನ ಚೆಲುವು- ಕಂಪು- ದುಂಬಿ-ಚಿಟ್ಟೆಗಳ ಸೌದರ್ಯದ ಚಿತ್ರಣವಿದೆ. 'ನಮ್ಮ ಯೋಧರು' ಕವಿತೆಯಲ್ಲಿ ಯೋಧರ ಬಗೆಗಿನ ಗೌರವವಿದೆ. ಇಂಗ್ಲೀಷ್ ನ ವ್ಯಾಮೋಹಕ್ಕೊಳಗಾಗಿ ಕನ್ನಡವನ್ನು ಮರೆಯದಿರಿ, "ಕನ್ನಡ ಮರೆತರೆ ತಾಯಿಯ ಕತ್ತನ್ನು ಕತ್ತಿಬೀಸಿ ಕುಯ್ದಂತೆ" ಎನ್ನುವಲ್ಲಿ ಕನ್ನಡದ ಬಗೆಗಿನ ಪ್ರೀತಿ, ಕಾಳಜಿ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲೇ ತರಕಾರಿ ಬೆಳೆಸಿ ಉಪಯೋಗಿಸಿದರೆ ಯಾವುದೇ ರೊಗರುಜಿನಗಳು ಬರುವುದಿಲ್ಲ ಎಂಬ ಆಶಯವನ್ನು 'ನಮ್ಮ ತರಕಾರಿ ತೋಟ' ಕವಿತೆಯು ನೀಡುತ್ತದೆ. ಮಕ್ಕಳಿಗೆ ಮನೆ-ಅಪ್ಪ-ಅಮ್ಮನೇ ಸರ್ವಸ್ವ. ಮನೆಯೆಂದರೆ ನೆಮ್ಮದಿಯ ತಾಣ, ಪ್ರೀತಿಯ ಗೂಡು. ಅಂಥ ಮನೆಯ ಬಗೆಗಿನ ಸುಂದರ ಕಲ್ಪನೆಯನ್ನು ಕವನದ ಮೂಲಕ ನಮ್ಮ ಮುಂದಿಡುತ್ತಾರೆ. 'ಸರ್ಕಸ್ ಆಟ' ದಲ್ಲಿ ಒಂದು ಅದ್ಭುತ ಲೋಕವನ್ನು ನಮ್ಮ ಕಣ್ಣ ಮುಂದೆ ತೆರೆದಿಡುತ್ತಾರೆ. ಸತ್ಯದಿಂದ ನಡೆಯಬೇಕು,ಸತ್ಯಕ್ಕೆ ಯಾವಾಗಲೂ ಜಯವೇ ಎಂಬುದನ್ನು ಸತ್ಯ ಹರಿಶ್ಚಂದ್ರ ಹಾಗೂ ಪುಣ್ಯಕೋಟಿಯ ನಿದರ್ಶನದ ಮೂಲಕ ಪ್ರತಿಪಾದಿಸುತ್ತಾರೆ.
ಒಟ್ಟಿನಲ್ಲಿ ಇಲ್ಲಿನ ಕವಿತೆಗಳಲ್ಲಿ ಪ್ರೀತಿಯ ದಾರದಲ್ಲಿ ನೇಯ್ದ ಅಪ್ಪ ಅಮ್ಮ ಅಜ್ಜ ಅಜ್ಜಿ ಅಣ್ಣ ತಂಗಿ ಮೊದಲಾದ ಸಂಬಂಧಗಳ ಮೌಲ್ಯವನ್ನು ತಿಳಿಸಲಾಗಿದೆ. ಪರಿಸರದ ಬಗೆಗಿನ ಕಾಳಜಿಯಿದೆ. ಗುರು ಹಿರಿಯರಲ್ಲಿ ದೇವರನ್ನು ಕಾಣಬೇಕೆಂದು ಹೇಳುತ್ತಾರೆ. ಪರರಿಗಾಗಿಯೇ ತನ್ನ ಜೀವನವನ್ನು ಮುಡಿಪಿರಿಸಿದ ಆಲದ ಮರವಿದೆ.ಪುಟ್ಟ ಮನದಲ್ಲಿ ಕುತೂಹಲ ಕೆರಳಿಸುವ ರೈಲುಬಂಡಿಯ ಚಿತ್ರಣವಿದೆ. ಜಾತ್ರೆಯ ಗಮ್ಮತ್ತು, ಹಳ್ಳಿಯ ಸೊಬಗು, ಕೋಲಾಟದ ಪರಿಚಯ, ಹಬ್ಬದ ಸಂಭ್ರಮ, ಆಚಾರ ವಿಚಾರಗಳು, ಆಚರಣೆ ಸಂಪ್ರದಾಯಗಳು ಹೀಗೆ ಹತ್ತು ಹಲವು ವಿಷಯಗಳು ಕವಿತೆಗಳಲ್ಲಿವೆ. ಇಲ್ಲಿನ ಹಲವು ಕವಿತೆಗಳಲ್ಲಿ ಪ್ರಾಣಿ ಪಕ್ಷಿಗಳ ಮೂಲಕ ಸುಂರವಾದ ಕಥೆಗಳನ್ನು ಹೆಣೆಯಲಾಗಿದೆ. ಆ ಕಥೆಗಳ ಮೂಲಕ ಮಕ್ಕಳಿಗೊಂದು ಸಂದೇಶ ನೀಡುತ್ತಾರೆ. ಸಮಾಜದ ಬಗೆಗೆ ಕಾಳಜಿ ತೋರುತ್ತಾರೆ. ಇಲ್ಲಿನ ಕೆಲವು ಕವಿತೆಗಳು ಲಯಬದ್ಧವಾಗಿ ಹಾಡಲು, ಅಭಿನಯಿಸಲೂ ಯೋಗ್ಯವಾಗಿವೆ. ಹಲವು ಕವಿತೆಗಳಲ್ಲಿ ಪ್ರಾಸವನ್ನು ಕಾಣಬಹುದು.
ಬರಹ: ಚೇತನಾ ಕುಂಬ್ಳೆ




