ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ವಚನದಲ್ಲಿ ನಾಮಾಮೃತ ತುಂಬಿ... ನಾಮಪದವಾದ ಮೇಲೆ ಸರಿಯಾದ ವಚನವನ್ನೇ ತುಂಬಿ!
"ಎಲ್ಲಕ್ಕೂ ಮಿಗಿಲಾಗಿ ಬೇರೆ ಬೇರೆ ಸಂದರ್ಭದಲ್ಲಿ ಬಳಕೆಯಾದ ವಾದವೆಂದರೆ ಪ್ರಕೃತಿ ಸಹಜ ಎಂಬುದು. ಇತ್ತೀಚಿನ ದಿನದಲ್ಲಂತೂ ಈ ಪ್ರಕೃತಿ ಸಹಜ ಎಂಬ ಟ್ಯಾಗ್ ಇಟ್ಟುಕೊಂಡ ತನ್ನೆಲ್ಲಾ ದೌರ್ಬಲ್ಯ ಮತ್ತು ಕ್ರೌರ್ಯವನ್ನು ಮನುಷ್ಯ ಸಮರ್ಥಿಸಿಕೊಳ್ಳುತ್ತಿದ್ದಾನೆ. ಮುಂದುವರೆದ(!?) ಸಮಾಜವು ಇದೇ ವಾದ ಬಳಸಿ ಕಾನೂನುಗಳನ್ನು ತರುತ್ತಿವೆ. ಸ್ವಜಾತಿ ಭಕ್ಷಣೆ ಹಲವಾರು ಪ್ರಾಣಿಯಲ್ಲಿ ಪ್ರಕೃತಿ ಸಹಜವಾದ್ದು, ಆದ್ದರಿಂದ ಮನುಷ್ಯ ಮನುಷ್ಯನನ್ನ ಯಾಕೆ ಕೊಂದು ತಿನ್ನಬಾರದು? ಆದರೆ ಆ ಬಗ್ಗೆ ಮಾತನಾಡುವ ನೈತಿಕತೆಯನ್ನು ಮನುಷ್ಯ ಕಳೆದುಕೊಂಡು ಶತಮಾನಗಳಾಯಿತು."
ಮೇಲಿನ ಪ್ಯಾರಗ್ರಾಫನ್ನು ಆಧುನಿಕ ಕನ್ನಡದ ಪ್ರತಿಭಾವಂತ ಬರಹಗಾರರೊಬ್ಬರ ಫೇಸ್‌ಬುಕ್ ಟಿಪ್ಪಣಿಯಿಂದ ಆಯ್ದುಕೊಂಡಿದ್ದೇನೆ. ಅವರು ಒಳ್ಳೆಯ ಲೇಖಕರು. ಅವರ ಪ್ರಖರ ಚಿಂತನೆಗಳು ಸತ್ತ್ವಯುತವಾದಂಥವು; ಕಾದಂಬರಿಗಳು ಯಶಸ್ಸು ಗಳಿಸಿರುವಂಥವು. ಆದರೆ ಅವರ ಫೇಸ್‌ಬುಕ್ ಟಿಪ್ಪಣಿಗಳಲ್ಲಿ ಹೀಗೆ ವಚನಗಳ ಆಯ ತಪ್ಪುವಿಕೆ ಓದುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಅವರನ್ನು ಅನುಸರಿಸಿ/ಅನುಕರಿಸಿ ಬರೆಯತೊಡಗುವವರೂ ಇಂಥವೇ ತಪ್ಪುಗಳನ್ನು ಮಾಡುವಂತಾಗುತ್ತದೆ. ಹಾಗಾಗಬಾರದು ಎನ್ನುವುದಷ್ಟೇ ಇಲ್ಲಿನ ಕಾಳಜಿ.
ಮೇಲಿನ ಪ್ಯಾರಗ್ರಾಫನ್ನು, ಅದರಲ್ಲಿನ ಪ್ರತಿಯೊಂದು ವಾಕ್ಯದಲ್ಲೂ ಇರುವ ವಚನ-ವ್ಯತ್ಯಾಸವನ್ನು ಸರಿದೂಗಿಸಿ ಬರೆದಾಗ ಈ ರೀತಿ ಇರುತ್ತದೆ:
"ಎಲ್ಲಕ್ಕೂ ಮಿಗಿಲಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾದ ವಾದವೆಂದರೆ ಪ್ರಕೃತಿಸಹಜ ಎಂಬುದು. ಇತ್ತೀಚಿನ ದಿನಗಳಲ್ಲಂತೂ ಈ ಪ್ರಕೃತಿಸಹಜ ಎಂಬ ಟ್ಯಾಗ್ ಇಟ್ಟುಕೊಂಡು ತನ್ನೆಲ್ಲ ದೌರ್ಬಲ್ಯ ಮತ್ತು ಕ್ರೌರ್ಯವನ್ನು ಮನುಷ್ಯ ಸಮರ್ಥಿಸಿಕೊಳ್ಳುತ್ತಿದ್ದಾನೆ. ಮುಂದುವರೆದ(!?) ಸಮಾಜವು ಇದೇ ವಾದ ಬಳಸಿ ಕಾನೂನುಗಳನ್ನು ತರುತ್ತಿದೆ. ಸ್ವಜಾತಿ ಭಕ್ಷಣೆ ಹಲವಾರು ಪ್ರಾಣಿಗಳಲ್ಲಿ ಪ್ರಕೃತಿಸಹಜವಾದದ್ದು, ಆದ್ದರಿಂದ ಮನುಷ್ಯ ಮನುಷ್ಯನನ್ನು ಯಾಕೆ ಕೊಂದು ತಿನ್ನಬಾರದು?... ಆದರೆ ಆ ಬಗ್ಗೆ ಮಾತನಾಡುವ ನೈತಿಕತೆಯನ್ನು ಮನುಷ್ಯ ಕಳೆದುಕೊಂಡು ಶತಮಾನಗಳಾದುವು."
====
೨. ಸಂಸ್ಕೃತದಲ್ಲಿರುವ ‘ಲೃ’ ಸ್ವರಾಕ್ಷರ ಕನ್ನಡದಲ್ಲಿಲ್ಲವಾದ್ದರಿಂದ...
ಇಂಗ್ಲಿಷ್‌ನ punctual ಎಂಬ ಪದಕ್ಕೆ ಸಮಾನಾರ್ಥಕವಾದ ಸಂಸ್ಕೃತ ಪದ ’ಕ್ಲೃಪ್ತ’ (ಕ್ ವ್ಯಂಜನಕ್ಕೆ ’ಲೃ’ ಸ್ವರಾಕ್ಷರ ಸೇರಿ ಆಗಿರುವ ‘ಕ್ಲೃ’, ಮತ್ತು, ಪ್ತ ಎಂಬ ಸಂಯುಕ್ತಾಕ್ಷರ ಸೇರಿ ಆದ ಪದ). ‘ಏರ್ಪಟ್ಟಿರುವ, ಸಿದ್ಧವಾಗಿರುವ, ನಿಶ್ಚಿತವಾದ, ವಿಹಿತವಾದ, ಗೊತ್ತಾದ’ ಮುಂತಾದ ಅರ್ಥಗಳನ್ನು ಕೊಟ್ಟಿದ್ದಾರೆ ಪ್ರೊ.ಜಿ.ಎನ್.ಚಕ್ರವರ್ತಿಯವರ ಸಂಸ್ಕೃತ-ಕನ್ನಡ ನಿಘಂಟುವಿನಲ್ಲಿ. ಕನ್ನಡದಲ್ಲಿ ಈ ಪದವನ್ನು ‘ಕ್ಲಪ್ತ’ ಎಂದು ಬರೆಯುತ್ತೇವೆ, ಬಳಸುತ್ತೇವೆ. ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟುವಿನಲ್ಲಿ ‘ಕ್ಲಪ್ತ’ = ‘ನಿಗದಿಪಡಿಸಿದ, ಗೊತ್ತುಪಡಿಸಿದ’ ಎಂಬ ಅರ್ಥಗಳನ್ನು ಕೊಟ್ಟಿದ್ದಾರೆ. ಕ್ಲಪ್ತ ಎನ್ನುವುದು ಗುಣವಾಚಕ ವಿಶೇಷಣ ಪದ (adjective). ಅದನ್ನು ನಾಮಪದವಾಗಿಸಿದಾಗ ಕ್ಲಪ್ತತೆ ಎಂದಾಗುತ್ತದೆ, punctuality ಎಂಬ ಅರ್ಥವನ್ನು ಕೊಡುತ್ತದೆ.
ಕೆಲವರು ಕ್ಲುಪ್ತ/ಕ್ಲುಪ್ತತೆ ಎಂದು ಬರೆಯುತ್ತಾರೆ. ಮತ್ತೆ ಕೆಲವರು ಕ್ಲಿಪ್ತ/ಕ್ಲಿಪ್ತತೆ ಎಂದು ಬರೆದು ಕ್ಲಿಪ್ ಹಾಕುತ್ತಾರೆ. ಇವುಗಳನ್ನು ತಪ್ಪು ಎನ್ನಲಾಗದು. ಏಕೆಂದರೆ ಸಂಸ್ಕೃತದಲ್ಲಿರುವ ‘ಲೃ’ ಸ್ವರಾಕ್ಷರ ಕನ್ನಡದಲ್ಲಿಲ್ಲವಾದ್ದರಿಂದ ಉಚ್ಚಾರದ ಹೋಲಿಕೆಯಿಂದಾಗಿ ಕ್ಲಪ್ತ, ಕ್ಲಿಪ್ತ, ಕ್ಲುಪ್ತ - ಇವೆಲ್ಲವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಮೀನಮೇಷ ಸರಿ. (ಸೌರಮಾನ ಹನ್ನೆರಡು ತಿಂಗಳುಗಳಲ್ಲಿ ಮೀನ ಕೊನೆಯದು, ಮೇಷ ಮೊದಲನೆಯದು. ಮೀನಮೇಷ ಎಣಿಸುವುದು ಅಂದರೆ ದಿನ, ನಕ್ಷತ್ರ, ತಿಂಗಳುಗಳನ್ನು ಎಣಿಸುತ್ತ ಸರಿಯಾದ ಮುಹೂರ್ತ ಬರಲೆಂದು ವೃಥಾ ಕಾಲಹರಣ ಮಾಡುವುದು). ಮೀನಾಮೇಷ ಎಂದು ಬರೆದರೆ ತಪ್ಪು.
ಆ) ಶತಪದ ಸರಿ. (ಊಟವಾದ ಅನಂತರ ಕನಿಷ್ಠ ನೂರು ಹೆಜ್ಜೆಗಳಷ್ಟಾದರೂ ನಡೆಯಬೇಕು ಎಂದು ಹಿರಿಯರ ಅನುಭವದ ಹಿತನುಡಿ. ಅದೇ ಶತಪದ). ಶತಪಥ ಎಂದು ತಪ್ಪಾಗಿ ಬರೆಯುವುದು ರೂಢಿಯಾಗಿಬಿಟ್ಟಿದೆ. ಅಲ್ಲಿ ನೂರು ‘ಪಥ’ (ದಾರಿ)ಗಳಾವುವೂ ಇಲ್ಲ.
ಇ) ಶ್ರದ್ಧಾಂಜಲಿ ಸರಿ. (ಶ್ರದ್ಧಾ + ಅಂಜಲಿ = ಶ್ರದ್ಧಾಂಜಲಿ). ಶೃದ್ಧಾಂಜಲಿ ತಪ್ಪು. ಕನ್ನಡದಲ್ಲಿ ಶ್ರದ್ಧಾ ಪದವನ್ನು ಶ್ರದ್ಧೆ ಎಂದು ಬಳಸುತ್ತೇವೆ. ಶೃದ್ಧೆ ಅಲ್ಲ.
ಈ) ಎಲೈ-ಎಲೌ ಎಂಬ ಸ್ಪಷ್ಟ ಲಿಂಗಭೇದ ಇರಬೇಕು. ನಾಟಕಗಳ ಸಂಭಾಷಣೆಯಲ್ಲಿ, ಪುರುಷಪಾತ್ರಗಳನ್ನು ಸಂಬೋಧಿಸುವಾಗ ‘ಎಲೈ...’ ಎನ್ನುವಂತೆ ಸ್ತ್ರೀಪಾತ್ರಗಳನ್ನು ಸಂಬೋಧಿಸುವಾಗ ‘ಎಲೌ...’ ಎನ್ನಬೇಕು. ಅವು ಕ್ರಮವಾಗಿ ಏ+ಅಯ್ಯಾ, ಏ+ಅವ್ವಾ ಎಂಬ ಉಚ್ಚಾರದಿಂದ ಬಂದಂಥವು. ಆದರೆ ‘ಎಲೈ’ ಎನ್ನುವುದು ಲಿಂಗರಹಿತ ಸಂಬೋಧನಾಪದವೇನೋ ಎಂದುಕೊಂಡು ಎಲ್ಲ ಕಡೆಯೂ ಅದನ್ನೇ ಬಳಸುವವರಿದ್ದಾರೆ. ಅದು ತಪ್ಪು. ‘ಎಲೈ ದಶರಥನೇ’, ‘ಎಲೈ ರಾಮನೇ...’ ಇತ್ಯಾದಿ ಇದ್ದಂತೆ ‘ಎಲೌ ಕೈಕೆಯೇ...’, ‘ಎಲೌ ಸೀತೆಯೇ...’ ಎಂದಾಗಬೇಕು.
ಉ) ಹೊಂದಿಕೆ ಸರಿ. ಹೊಂದು+ಇಕೆ. ಇಂಗ್ಲಿಷ್ನಲ್ಲಿ ಸಮಾನಾರ್ಥಕ ಪದ adjustment. `ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ| ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ|' ಎನ್ನುತ್ತಾರೆ ಜಿ. ಎಸ್. ಶಿವರುದ್ರಪ್ಪನವರು ‘ಎಲ್ಲೋ ಹುಡುಕಿದೆ ಇಲ್ಲದ ದೇವರ...’ ಕವಿತೆಯಲ್ಲಿ. ಆದರೆ ‘ಹೊಂದಿಕೆ’ ಎಂಬ ಪದ ಅಪರೂಪವಾಗಿದೆ. ಹೊಂದಾಣಿಕೆ ಎಂಬ ತಪ್ಪು ರೂಪವೇ ಹೆಚ್ಚು ಬಳಕೆಯಲ್ಲಿದೆ!
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
===========



