ಮಂಜೇಶ್ವರ: ವರ್ಕಾಡಿ ಸಮೀಪದ ಅರಿಂಗುಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುತುವರ್ಜಿಯಿಂದ ನವೀಕರಣಗೊಳಿಸಲಾದ ಕೆರೆಯ ನಾಮ ಫಲಕವನ್ನು ಶನಿವಾರ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಅನಾವರಣಗೊಳಿಸಿದರು.
ಕೆರೆಯ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದ ಸಚಿವರು ಸಾಂಪ್ರದಾಯಿಕ ಜಲಮೂಲಗಳಲ್ಲಿ ಪ್ರಮುಖವಾದ ಕೆರೆಗಳನ್ನು ಗುರುತಿಸಿ ಅಭಿವೃದ್ದಿಪಡಿಸುವುದು ಇಂದು ತುರ್ತು ಆಗಬೇಕಾದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇಂತಹ ಮಹತ್ವಪೂರ್ಣ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ.ಪರಿಸರ ಸಂರಕ್ಷಣೆಯ ಬಗ್ಗೆ ನಾವು ಇನ್ನಷ್ಟು ಜಾಗೃತರಾಗಬೇಕು ಎಂದು ತಿಳಿಸಿದರು.ಶ್ರೀಕ್ಷೇತ್ರದ ಸಮಾಜಮುಖಿ ಯೋಜನೆಗಳು ಸಮಾಜ ಹಿತಕ್ಕೆ ಎಂದಿಗೂ ಪ್ರೇರಣದಾಯಿ ಎಂದು ಸಚಿವರು ಶ್ಲಾಘಿಸಿದರು.
ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸೀಕುಮಾರಿ ಕೆ, ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಹಿಮತ್ ರಝಾಕ್, ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಆನಂದ ಕೆ., ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್, ಗ್ರಾ.ಪಂ.ಸದಸ್ಯ ಗೋಪಾಲಕೃಷ್ಣ ಪಜ್ವ, ವಸಂತ ಎಸ್., ಸೀತಾ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮುಖಂಡರಾದ ಬಿ.ವಿ.ರಾಜನ್, ತಮ್ಮಯ್ಯ ಆಚಾರ್ ಕನಿಲ,ದಯಾಕರ ಮಾಡ, ಅಜಿತ್ ಎಂ.ಸಿ., ಜಯರಾಮ ಬಲ್ಲಂಗುಡೇಲು, ಸಿದ್ದೀಕ್, ಮುಸ್ತಫ, ಲಕ್ಷ್ಮೀನಾರಾಯಣ ಭಟ್, ಜನಾರ್ದನ ಅರಿಂಗುಳ, ರಾಮ ಮಜಿಬೈಲು, ದಿನೇಶ್ ರೆಂಜಿಪಡ್ಪು, ಯೋಜನೆಯ ಮೇಲ್ವಿಚಾರಕ ಅನಿಲ್, ಸೇವಾ ಪ್ರತಿನಿಧಿ ಸುಮನ, ಸುಧಾಕರ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ಏನಿದು ಯೋಜನೆ:
ಅರಿಂಗುಳದಲ್ಲಿ ಪ್ರಾಚೀನವಾದ ಮದಕವೊಂದು ನಶಿಸುವ ಹಂತದಲ್ಲಿತ್ತು. ಮುಕ್ಕಾಲು ಎಕ್ರೆ ಪರಿಸರದಲ್ಲಿದ್ದ ಮದಕ ಅರ್ಧ ಅಡಿಗಳಷ್ಟು ಮಾತ್ರ ಆಳ ಹೊಂದಿತ್ತು. ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುತುವರ್ಜಿಯಿಂದ ಈ ಮದಕ ನವೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ.ಗಳ ಅನುದಾನ ಬಳಸಿ ಇದೀಗ 25 ಅಡಿ ಆಳದ 50 ಸೆಂಟ್ ವ್ಯಾಪ್ತಿಯಲ್ಲಿ ಕೆರೆ ನಿರ್ಮಿಸಲಾಗಿದೆ. ಈ ಮೂಲಕ ಪರಿಸರದ ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚುವ ನಿರೀಕ್ಷೆಯಿದ್ದು, ಈ ಪ್ರದೇಶದ ಎಕ್ರೆಗಟ್ಟಲೆ ಕೃಷಿ ಭೂಮಿಗೆ ಉಪಕಾರವಾಗಲಿದೆ.


