ಬದಿಯಡ್ಕ: 48ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಪೂಜಿಸಲ್ಪಟ್ಟ ಗಣಪತಿ ವಿಗ್ರಹವನ್ನು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ವರದಾ ನದಿಯಲ್ಲಿ ಮಂಗಳವಾರ ರಾತ್ರಿ ಜಲಸ್ಥಂಭನಗೊಳಿಸಲಾಯಿತು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಜಲಸ್ಥಂಭನಗೊಳಿಸುವ ಸಂದರ್ಭದಲ್ಲಿ ನೂರಾರು ಮಂದಿ ಭಕ್ತಾದಿಗಳು ವರದಾ ನದಿಯ ಪರಿಸರದಲ್ಲಿ ಭಕ್ತಿಭಾವಗಳೊಂದಿಗೆ ಶ್ರೀ ದೇವರಿಗೆ ನಮಿಸಿ, ವರದಾ ನದಿಯಲ್ಲಿ ಮಿಂದು ಪುನೀತರಾದರು. ಪೆರಡಾಲ ಶಿವಶಕ್ತಿ ಫ್ರೆಂಡ್ಸ್ ನೇತೃತ್ವದಲ್ಲಿ ವರದಾ ನದಿಯ ಪರಿಸರವನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು.
ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ಸುಡುಮದ್ದು ಪ್ರದರ್ಶನದಿಂದ ಉಂಟಾದ ತ್ಯಾಜ್ಯಗಳನ್ನು ಕೂಡಲೇ ಕಾರ್ಯಕರ್ತರು ತೆರವುಗೊಳಿಸಿರುವುದು ಎಲ್ಲೆಡೆ ವ್ಯಾಪಕ ಪ್ರಶಂಸೆಗೆ ಒಳಗಾಯಿತು.


