ಮುಳ್ಳೇರಿಯ: ಯಂತ್ರಗಳಿಂದ ಉಂಟಾಗುವ ಮಾಲಿನ್ಯವು ಮಂತ್ರಗಳಿಂದ ಪರಿಹಾರವಾಗುತ್ತದೆ. ಯಂತ್ರಗಳು ಪ್ರಕೃತಿಯನ್ನು ಮಲಿನಗೊಳಿಸಿದರೆ ಮಂತ್ರಗಳು ಪ್ರಕೃತಿಯನ್ನು ಶುದ್ಧಗೊಳಿಸುತ್ತವೆ. ಮಂತ್ರಗಳು ಯಾವ ಯಜ್ಞಕ್ಕೋಸ್ಕರವಾಗಿ ಆವಿರ್ಭಾವಗೊಂಡವೋ ಆ ಯಜ್ಞವು ಪ್ರಕೃತಿಯನ್ನು ಶುದ್ಧಮಾಡುತ್ತವೆ. ಭಾರತವು ವೇದಗಳ ಭೂಮಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನದ ನುಡಿಗಳನ್ನಾಡಿದರು.
ಬೆಂಗಳೂರಿನ ರಾಮಾಶ್ರಮದಲ್ಲಿ ಜರಗುತ್ತಿರುವ ರಾಮಾಯಣ ಚಾತುರ್ಮಾಸ್ಯದ ಸಂದರ್ಭದಲ್ಲಿ ಬುಧವಾರ ಮುಳ್ಳೇರಿಯ ಹವ್ಯಕ ಮಂಡಲದ ವಲಯಗಳಾದ ಈಶ್ವರ ಮಂಗಲ, ಸುಳ್ಯ, ಗುತ್ತಿಗಾರು, ಚಂದ್ರಗಿರಿ, ಕಾಸರಗೋಡು ಹಾಗೂ ಕೊಡಗು ವಲಯಗಳ ಭಿಕ್ಷಾಸೇವೆಯನ್ನು ಸ್ವೀಕರಿಸಿ ಅವರು ಶಿಷ್ಯವೃಂದದವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಓಂಕಾರದ ಅರ್ಥವನ್ನು ಕೃಷ್ಣನು ವೇಣುನಾದದ ಮೂಲಕವಾಗಿ ನೀಡಿದ್ದಾನೆ. ವೇದದ ಸಾರವೇ ಗೀತೆಯಾಗಿದೆ. ಕಲಿಯುಗದಲ್ಲಿ ವೇದ ನಾದದ ಅಗತ್ಯ ಬಹಳಷ್ಟು ಇದೆ. ಕೇಳ ಬಾರದ್ದನ್ನೆಲ್ಲ ಕೇಳುವಂತಹ ಕಾಲದಲ್ಲಿರುವ ನಮ್ಮೆಲ್ಲರ ಕಿವಿಗಳು ಕಲುಷಿತವಾಗಿದೆ. ಕಿವಿ ಎನ್ನುವುದು ಮಸ್ತಿಷ್ಕಕ್ಕಿರುವ ದ್ವಾರವಾಗಿದ್ದು, ಈ ಕಿವಿಯ ಮೂಲಕ ವೇದಗಳ ಶ್ರವಣದಿಂದ ನಮ್ಮೆಲ್ಲ ದೋಷವೂ ನಿವಾರಣೆಯಾಗುತ್ತದೆ ಎಂದರು.
ಭಿಕ್ಷಾಸೇವೆಯ ಅಂಗವಾಗಿ ಗೋಪೂಜೆ, ಶ್ರೀಪಾದುಕಾ ಪೂಜೆ, ಶ್ರೀ ಸೀತಾರಾಮ ಚಂದ್ರಮೌಳೀಶ್ವರ ಪೂಜೆ, ಸ್ವರ್ಣ ಮಂಟಪ ಪೂಜಾ ಸೇವೆಯಲ್ಲಿ ಶಿಷ್ಯವೃಂದದವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಸುವಸ್ತುಗಳಿಂದ ಶ್ರೀಗಳಿಗೆ ತುಲಾಭಾರ ಸೇವೆ ನಡೆಸಲಾಯಿತು. ಇದೇ ವೇಳೆ ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತವಾಗಲಿರುವ ತಕ್ಷಶಿಲಾ ಮಾದರಿಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಲಯಕ್ಕೆ ಶಿಷ್ಯವೃಂದದವರು ದೇಣಿಗೆ ಸಮರ್ಪಣೆ ಮಾಡಿದರು. ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳು, ವೇದಮೂರ್ತಿ ವಂಶೀಕೃಷ್ಣ ಘನಪಾಠಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಶ್ರೀಗಳು ಆಶೀರ್ವದಿಸಿದರು. ಜುಲೈ 16ರಂದು ಆರಂಭವಾದ ಚಾತುರ್ಮಾಸ್ಯ ವ್ರತವು ಸೆ.14ರಂದು ಸೀಮೋಲ್ಲಂಘನದೊಂದಿಗೆ ಸಂಪನ್ನವಾಗಲಿದೆ.


