ಮಂಜೇಶ್ವರ: ತಲಪಾಡಿಯಿಂದ ಕಾಸರಗೋಡು ತನಕ ಸಂಪೂರ್ಣ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ನಡೆಸದೆ ಜನತೆಯನ್ನು ಸಂಕಷ್ಟಕ್ಕೆ ತಳ್ಳಿರುವ ಕೇರಳದ ಎಡರಂಗ ಸರ್ಕಾರದ ವಿರುದ್ಧ ರಾಷ್ಟ್ರೀಯ ಹೆದ್ದಾರಿ 66 ದುರಸ್ತಿ ಕಾಮಗಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಮೋರ್ಚಾದಿಂದ ಮಂಜೇಶ್ವರ ಮಾಡದಿಂದ ಹೋರಾಟ ಮೆರವಣಿಗೆ ಹಾಗೂ ಉದ್ಯಾವರ ಹತ್ತನೇ ಮೈಲ್‍ನಲ್ಲಿ ಹೆದ್ದಾರಿ ರಸ್ತೆ ತಡೆ ಪ್ರತಿಭಟನೆ ಶುಕ್ರವಾರ ನಡೆಯಿತು.
ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿಜಯ್ ಕುಮಾರ್ ರೈ ಉದ್ಘಾಟಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ ಮಾತನಾಡಿ, ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಗಡಿನಾಡು ಕನ್ನಡಿಗರೇ ಬಹುಸಂಖ್ಯಾತರಾಗಿರುವ ಈ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಈಗಾಗಲೇ ತಲಪಾಡಿ ಕಾಸರಗೋಡು ರಸ್ತೆ ದುರಸ್ತಿಗೆ 14 ಕೋಟಿ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ದುರಸ್ಥಿಗೆ ಆಸಕ್ತಿ ವಹಿಸದೆ ನಿರ್ಲಕ್ಷ್ಯ ಧೋರಣೆ ತಳೆಯುತ್ತಿರುವುದು ಜನ ವಂಚನೆ ಎಂದು ಅವರು ಆರೋಪಿಸಿದರು. ಹೆದ್ದಾರಿ ದುರಸ್ಥಿಯು ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಹೊಣೆ. ಸರ್ಕಾರಿ ಬಸ್ ಮೊಟಕುಗೊಳಿಸಿ ಜನರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಈ ಹೋರಾಟ ಎಂದು ಹೇಳಿದರು.
ಮುಂದಿನ ಹತ್ತು ದಿನಗಳೊಳಗೆ ರಸ್ತೆ ದುರಸ್ತಿ ಆರಂಭಿಸದಿದ್ದರೆ 24 ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಯುವಾಮೋರ್ಚಾ ತೀರ್ಮಾನಿಸಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಮುಖಂಡರಾದ ಸಂತೋಷ್ ದೈಗೋಳೀ, ಧನ್‍ರಾಜ್ ಬೀಟಿಗದ್ದೆ, ಪ್ರಜಿತ್ ಶೆಟ್ಟಿ ಸುಳ್ಯಮೆ,ಬಾಬು, ಯಾದವ ಬಡಾಜೆ, ಶಶಿಕಲಾ ಪ್ರಕಾಶ್, ಬೇಬಿಲತಾ ಯಾದವ್ ಮೊದಲಾದವರು ನೇತೃತ್ವ ವಹಿಸಿದ್ದರು.



