ಬದಿಯಡ್ಕ: ಹೊಸ ಆರ್ಥಿಕ ನೀತಿಯಿಂದ ರಾಷ್ಟ್ರಾದ್ಯಂತ ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗಿ ಜನಸಾಮಾನ್ಯರ ಸಹಿತ ಎಲ್ಲಾ ಶ್ರೇಣಿಯ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಭಾರೀ ಕೂಗಿನ ಮಧ್ಯೆ ಸಾಮಾನ್ಯ ವ್ಯಾಪಾರಿಯೋರ್ವ ಐಶಾರಾಮಿ ಬಿಎಂಡಬ್ಲು ಕಾರಲ್ಲಿ ಸಂತೆ ವ್ಯಾಪಾರ ನಡೆಸಿರುವುದು ಭಾರೀ ಪ್ರಚಾರಕ್ಕೆ ಕಾರಣವಾಗಿದೆ.
ಪ್ರತಿ ವಾರದ ಶನಿವಾರ ಬದಿಯಡ್ಕದಲ್ಲಿ ವಾರದ ಸಂತೆ ನಡೆಯುತ್ತಿದ್ದು, ನೂರಾರು ವ್ಯಾಪಾರಿಗಳೂ, ಗ್ರಾಹಕರೂ ಭೇಟಿ ನೀಡುತ್ತಾರೆ. ಸೆ.7 ರಂದು ಶನಿವಾರ ಐಶಾರಾಯಿ ಕಾರಾಗಿರುವ ಬಿಎಂಡಬ್ಲು ಕಾರಲ್ಲಿ ಆಗಮಿಸಿದ ವ್ಯಾಪಾರಿ ತಂಡ ಬಟ್ಟೆ ವ್ಯಾಪಾರ ನಡೆಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದೆ.
ನೆರೆ ಹಾವಳಿಯಿಂದ ರಾಜ್ಯ ಒಂದೆಡೆ ತತ್ತರಿಸಿ ವ್ಯಾಪಕ ಆರ್ಥಿಕ ಹಿನ್ನಡೆಯಲ್ಲಿದೆ ಎಂಬ ಹೇಳಿಕೆಯ ಮಧ್ಯೆ ವಾರದ ಸಂತೆಗೆ ಐಶಾರಾಮಿ ಕಾರಲ್ಲಿ ಆಗಮಿಸಿ ವ್ಯಾಪಾರ ನಡೆಸುವವರೂ ನಮ್ಮಲ್ಲಿದ್ದಾರೆ ಎಂಬುದು ಇದೀಗ ಜನರ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ವ್ಯಾಪಾರಿಯ ಸ್ಪಷ್ಟ ಮಾಹಿತಿ ಲಭ್ಯವಾಗದಿದ್ದರೂ ಅನೇಕರು ಶನಿವಾರ ಬದಿಯಡ್ಕ ಸಂತೆಯಲ್ಲಿ ಈತನನ್ನು ನೋಡಿ ಒಮ್ಮೆ ಕಣ್ಣು ಹಾಯಿಸಿ ಬಂದವರು ಬಹಳಷ್ಟು ಮಂದಿ ಇದೀಗ ಮೂಗಿಗೆ ಬೆರಳೇರಿಸಿದ್ದಾರೆ.


