HEALTH TIPS

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಭಾಜನರಾದ ಕಾಸರಗೋಡಿನ ಬಾ.ನಾ.ಸುಬ್ರಹ್ಮಣ್ಯ

       ಕಾಸರಗೋಡು: ಬೆಂಗಳೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಚಲನಚಿತ್ರ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಬಾ.ನಾ.ಸುಬ್ರಹ್ಮಣ್ಯ ಅವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡ ದಿನಾಚರಣೆಯ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸಂದಿದೆ.
      ಚಲನಚಿತ್ರ ವಿಮರ್ಶಕರು ಎಂಬ ನೆಲೆಯಲ್ಲಿ ಅವರಿಗೆ ಈ ಗೌರವ ಸನ್ಮಾನ ನೀಡಲಾಗಿದ್ದು, ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಶಸ್ತಿಗಳನ್ನು ಪ್ರದಾನಮಾಡಿದರು. ಸಾಹಿತಿ ಚಂಪಾ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಸಂಗೀತ ಸಂಯೋಜಕ ರತ್ನಂ, ಗಾಯಕಿ ಮಂಜುಳಾ ಗುರುರಾಜ್,   ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಹೆಸರನ್ನು ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ  ಅಧ್ಯಕ್ಷತೆಯ ಆಯ್ಕೆ ಸಮಿತಿ  `ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. 
            ಪರಿಚಯ:
     ಕಾಸರಗೋಡಿನ ಬಾಡೂರು ಹುಟ್ಟೂರು. ನಾರಾಯಣ ಆಚಾರ್ಯ, ಕಮಲ ದಂಪತಿಯ ಮಗ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಬಾಡೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಬಳಿಕ ಪ್ರೌಢಶಾಲಾ ವ್ಯಾಸಂಗ ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪಡೆದರು. ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗ. ಸ್ನಾತಕೋತ್ತರ ಪದವಿ (ಕನ್ನಡ ಸಾಹಿತ್ಯ  ಮತ್ತು  ಚರಿತ್ರೆ) ಕಲ್ಲಿಕೋಟೆ ವಿ.ವಿ., 1976ರಲ್ಲಿ, ದ್ವಿತೀಯ ರ್ಯಾಂಕ್‍ನೊಂದಿಗೆ ಉತ್ತೀರ್ಣರಾದರು.
       ಶಾಲಾ ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು, ಬರೆದು ನಿರ್ದೇಶಿಸಿದ `ಹುಚ್ಚುಹೊಳೆ ನಾಟಕಕ್ಕೆ ನೆಹರೂ ಯುವಕ ಕೇಂದ್ರದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು. ಮಿತ್ರಾ, ಕಾಸರಗೋಡು ಥಿಯೇಟರ್ಸ್ ರಂಗತಂಡಗಳಲ್ಲಿ ಸಕ್ರಿಯರಾಗಿದ್ದವರು. ಕಾಲೇಜು ವ್ಯಾಸಂಗ ದಿನಗಳಲ್ಲೇ ಗೆಳೆಯರೊಂದಿಗೆ ಟ್ಯುಟೋರಿಯಲ್ ಕಾಲೇಜು ಆರಂಭಿಸಿ, ಕಲಿಸುತ್ತ, ಕಲಿಯುತ್ತಿದ್ದ ಅವರು, ಧಾರವಾಡದ ಜೆ.ಎಸ್.ಎಸ್. ಕಾಲೇಜಲ್ಲಿ ಎರಡು ವರ್ಷ (1978- 80) ಕನ್ನಡ ಉಪನ್ಯಾಸಕನಾಗಿದ್ದರು.
ಹಾಲಿ ಸ್ವತಂತ್ರ ಪತ್ರಕರ್ತರಾಗಿದ್ದು, ಮೈಸೂರಿನಿಂದ ಪ್ರಕಟವಾಗುತ್ತಿರುವ ಆಂದೋಲನ ದಿನಪತ್ರಿಕೆಯ ಸಿನಿಮಾ ಪ್ರತಿನಿಧಿಯಾಗಿರುವ ಬಾ.ನಾ.ಸುಬ್ರಹ್ಮಣ್ಯ ಅವರದು ಚಲನಚಿತ್ರ ಪತ್ರಕರ್ತರಾಗಿ 39 ವರ್ಷಗಳ ಅನುಭವ. ಚಿತ್ರದೀಪ, ಚಿತ್ರತಾರ, ನಕ್ಷತ್ರಲೋಕ, ಅರಗಿಣಿ  ಚಲನಚಿತ್ರ  ಸಾಪ್ತಾಹಿಕಗಳಲ್ಲಿ, ಸಂಕೇತ ವಾರಪತ್ರಿಕೆ, ವಿಜಯಚಿತ್ರ  ಮಾಸಿಕಗಳಲ್ಲಿ  ಕೆಲಸ ಮಾಡಿದ ಅನುಭವ. ನಾಡಿನ ಹೆಸರಾಂತ ದಿನಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕಗಳ ಸಿನಿಮಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries