ಕಾಸರಗೋಡು: ಪೆರಿಯದಲ್ಲಿರುವ ಸೆಂಟ್ರಲ್ ವಿವಿಯಲ್ಲಿ ಭಾರೀ ಉಪಕ್ರಮಗಳ ತರುವಾಯ ಮಂಜೂರುಗೊಂಡ ಕನ್ನಡ ಭಾಷಾಧ್ಯಯನ ಕೇಂದ್ರದ ತರಗತಿಗಳಿಗೆ ಕೊನೆಗೂ ಪ್ರವೇಶಾತಿ ಭರ್ತಿಗೊಂಡಿದ್ದು, ಭೀತಿ ಮರೆಯಾಗಿದೆ.
ಕನ್ನಡ ಹೋರಾಟಗಾರರ ಹಾಗೂ ಭಾಷಾ ಅಲ್ಪಸಂಖ್ಯಾತರ ಹೋರಾಟದ ಫಲವಾಗಿ ಪೆರಿಯ ಕ್ಯಾಂಪಸ್ ಗೆ ಕನ್ನಡ ಸ್ನಾತಕೋತ್ತರ ವಿಭಾಗ ಮಂಜೂರುಗೊಂಡಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಕೇಂದ್ರೀಯ ವಿವಿ ಪೆರಿಯ ಕ್ಯಾಂಪಸ್ ನಲ್ಲಿ 2019ನೇ ಶೈಕ್ಷಣಿಕ ವರ್ಷದಲ್ಲಿ ಪ್ರವಾಸೋಧ್ಯಮ, ವಾಣಿಜ್ಯ-ವ್ಯವಹಾರ ನಿರ್ವಹಣೆ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ಒದಗಿಸಿತ್ತು. ಕನ್ನಡ ಸ್ನಾತಕೋತ್ತರ ಹೊರತುಪಡಿಸಿ ಮಿಕ್ಕುಳಿದ ವಿಭಾಗಗಳಿಗೆ ಪ್ರವೇಶಾತಿ ಜು.30 ರಂದು ಆರಂಭಗೊಂಡು ನಿಗದಿತ ದಿನಗಳೊಳಗೆ ಭರ್ತಿಯಾಗಿತ್ತು.ಆದರೆ ಕನ್ನಡ ಸ್ನಾತಕೋತ್ತರ ವಿಭಾಗ ಪ್ರವೇಶಾತಿಗೆ ವಿದ್ಯಾರ್ಥಿಗಳ ಕೊರತೆ ಕಂಡುಬಂದು ಆತಂಕಕ್ಕೆ ಕಾರಣವಾಗಿತ್ತು.
ಕೇಂದ್ರೀಯ ವಿವಿಯ ಪ್ರವೇಶ ಶುಲ್ಕ, ವಸತಿ ಶುಲ್ಕಗಳು ದುಬಾರಿಯಾಗಿವೆ.ಜೊತೆಗೆ ಪೆರಿಯ ಕ್ಯಾಂಪಸ್ ಕಾಸರಗೋಡು ನಗರದಿಂದ ಸುಮಾರು 20 ಕಿಲೋಮೀಟರ್ ಗಳಷ್ಟು ದೂರದಲ್ಲಿದ್ದು ವಿದ್ಯಾರ್ಥಿಗಳ ಪ್ರಯಾಣ ಸೌಕರ್ಯಗಳಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ ಪ್ರವೇಶಾತಿಯಲ್ಲಿ ಆರಂಭದಲ್ಲಿ ನಿರೀಕ್ಷಿತ ಮಟ್ಟ ತಲಪಲಾಗಿಲ್ಲ ಎಂದು ಭಾವಿಸಲಾಗಿದೆ.
ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ 50 ಮಂದಿಗಳಿಗೆ ಕಲಿಕೆಗೆ ಅವಕಾಶವಿದ್ದು, ಕನಿಷ್ಠ 10 ಮಂದಿ ಪ್ರವೇಶಾತಿ ಹೊಂದದಿದ್ದಲ್ಲಿ ಅಧ್ಯಯನ ಕೇಂದ್ರ ಹಿಂಪಡೆಯುವ ಭೀತಿಯಿತ್ತು.ಇದೀಗ ಎರಡೆರಡು ಬಾರಿ ದಿನಾಂಕ ವಿಸ್ತರಿಸುವ ಮೂಲಕ 12 ಮಂದಿ ಪ್ರವೇಶಾತಿ ಹೊಂದಿರುವುದರಿಂದ ಅಧ್ಯಯನ ಕೇಂದ್ರ ನೆಲೆಗೊಳ್ಳುವುದು ಖಾತ್ರಿಯಾಗಿದೆ.


