ಕಾಸರಗೋಡು: ಕೇರಳ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ಮಲಯಾಳ ಭಾಷೆಯಲ್ಲಿ ಮಾಡಬೇಕೆಂಬ ವಿಧಾನಸಭಾ ಸಮಿತಿ ಸಲ್ಲಿಸಿದ ಶಿಫಾರಸಿನಂತೆ ಇನ್ನು ಮುಂದೆ ರಾಜ್ಯದಲ್ಲಿ ಪಿಎಸ್ಸಿ ಪರೀಕ್ಷೆ ಮಲಯಾಳ ಭಾಷೆಯಲ್ಲಿ ನಡೆಸುವ ಕುರಿತು ತಿರುವನಂತಪುರದಲ್ಲಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಐಕ್ಯ ಮಲಯಾಳ ಸಂಘಟನೆಯ ನಾಯಕರೊಂದಿಗೆ ನಡೆಸಿದ ಮಾತುಕತೆಯಂತೆ ಶೀಘ್ರದಲ್ಲೇ ಈ ಕುರಿತು ಕಾನೂನು ಜಾರಿಗೊಳಿಸಲು ತೀರ್ಮಾನಿಸಿದೆ.
ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಹಾಗು ತಮಿಳರಿಗೆ ಆಯಾ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದರು. ಆದರೆ ಕನ್ನಡ ವಿರೋಧಿಗಳಾದ ಮಲಯಾಳಿ ಅಧಿಕಾರಿಗಳು ಮೇಲಿನ ನೆಪವೊಡ್ಡಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಕುತಂತ್ರಗಳನ್ನು ಮಾಡುವ ಸಾಧ್ಯತೆಯಿದೆ. ಭಾಷಾ ಅಲ್ಪಸಂಖ್ಯಾತರಾದ ಕಾಸರಗೋಡಿನ ಕನ್ನಡಿಗರಿಗೆ ಮೂಲಭೂತವಾಗಿ ನಮ್ಮ ಹಕ್ಕಿನ ಪ್ರಕಾರ ನಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯುವ ಅವಕಾಶವನ್ನು ಕಸಿದುಕೊಂಡರೆ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ಕನ್ನಡ ಹೋರಾಟ ಸಮಿತಿ ಎಚ್ಚರಿಕೆಯನ್ನು ನೀಡಿದೆ. ಈ ಕುರಿತು ತುರ್ತಾಗಿ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿ ಕನ್ನಡಿಗರ ಸಂಶಯವನ್ನು ದೂರೀಕರಿಸಬೇಕೆಂದು ಕೋರಲಾಗಿದೆ.
ಈ ಬಗ್ಗೆ ಕಾಸರಗೋಡಿನ ಸಮಸ್ತ ಕನ್ನಡಿಗರು ಮನವಿಯ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

