ಕಾಸರಗೋಡು: ದಿಶ (ಡಿಸ್ಟ್ರಿಕ್ಟ್ ಡೆವೆಲಪ್‍ಮೆಂಟ್ ಕೋ-ಆರ್ಡಿನೇಷನ್ ಆ್ಯಂಡ್ ಡೆವೆಲಪ್‍ಮೆಂಟ್ ಕಮಿಟಿ) ಸಭೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ಜರಗಿತು.
ವಿವಿಧ ಇಲಾಖೆಗಳ ಮುಖಾಂತರ ಜಿಲ್ಲೆಯಲ್ಲಿ ಜಾರಿಗೊಳಿಸುವ ಕೇಂದ್ರ ಸರ್ಕಾರಿ ಯೋಜನೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವ ಕೇಂದ್ರ ಸರಕಾರಿ ಯೋಜನೆಗಳಾದ ಉದ್ಯೋಗ ಖಾತರಿ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ, ಪಿ.ಎಂ.ಆವಾಸ್ ಯೋಜನೆ, ಸ್ವಚ್ಛ್ ಭಾರತ್ ಸಹಿತ 20 ಯೋಜನೆಗಳ 2019-20 ಆರ್ಥಿಕ ವರ್ಷದ ಪ್ರಗತಿ ಕುರಿತು ಅವಲೋಕನ ನಡೆಸಲಾಯಿತು.
ಪ್ರಧಾನ ಯೋಜನೆಯಾಗಿರುವ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ ಎಪ್ರಿಲ್ ತಿಂಗಳಿಂದ ಸೆಪ್ಟೆಂಬರ್ ಒಂದನೇ ತಾರೀಕಿನ ವರೆಗೆ ಜಿಲ್ಲೆಯಲ್ಲಿ 13,066,75 ಉದ್ಯೋಗ ದಿನಗಳ ಸೃಷ್ಟಿ ಸಾಧ್ಯವಾಗಿದೆ. ಇದರಲ್ಲಿ ಬ್ಯಾಂಬೂ ಕ್ಯಾಪಿಟಲ್ ಯೋಜನೆಯಲ್ಲಿ ಮಾತ್ರ ಕಾಸರಗೋಡು, ಮಂಜೇಶ್ವರ ಬ್ಲಾಕ್‍ಗಳಲ್ಲಿ 42,990 ಉದ್ಯೋಗ ದಿನಗಳು ಸೃಷ್ಟಿಯಾಗಿವೆ ಎಂದು ತಿಳಿಸಲಾಯಿತು.
ಕರಾವಳಿ ವಲಯದಲ್ಲಿ ಮಹಿಳಾ ಉದ್ಯೋಗ ಖಾತರಿ ಯೋಜನೆ ಪ್ರಕಾರ ದುಡಿಯಲು ಯಾರೂ ಬರದೇ ಇರುವ ಬಗ್ಗೆ ಜನಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪ ನಡೆಸಿದರು. ಜಿಲ್ಲೆಯಲ್ಲಿ ಈ ಅವಧಿಯಲ್ಲಿ 63 ಕುಟುಂಬಗಳು ನೂರು ನೌಕರಿ ದಿನಗಳನ್ನು ಪೂರ್ಣಗೊಳಿಸಿವೆ. ಪಿ.ಎಂ. ಗ್ರಾಮೀಣ ಸಡಕ್ ಯೋಜನೆಯಲ್ಲಿ ಜುಲೈ 31 ರ ವರೆಗೆ 244.403 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಇದಕ್ಕಾಗಿ 12939.52 ಲಕ್ಷ ರೂ. ವೆಚ್ಚವಾಗಿದೆ. ಸಾಮಾಜಿಕ ಸುರಕ್ಷೆ ಯೋಜನೆ ಪ್ರಕಾರ ಜಿಲ್ಲೆಯಲ್ಲಿ 1,56,636 ಮಂದಿಗೆ ಪಿಂಚಣಿ ನೀಡಲಾಗಿದೆ. 79,174 ಫಲಾನುಭವಿಗಳಿಗೆ ಇದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ, 18,388 ಮಂದಿಗೆ ಇಂದಿರಾಗಾಂಧಿ ರಾಷ್ಟ್ರೀಯ ವಿಶೇಷ ಚೇತನ ಪಿಂಚಣಿ, 59,074 ಮಂದಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ನೀಡಲಾಗಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಆದೇಶ ಪ್ರಕಾರ ಆಯ್ದ ಬೇಡಡ್ಕ, ಮಡಿಕೈ, ಕಿನಾನೂರು-ಕರಿಂದಳಂ ಎಂಬ ಮೂರು ಗ್ರಾಮ ಪಂಚಾಯತ್‍ಗಳಲ್ಲಿ ಝೀರೋ ವೇಸ್ಟ್ ಯೋಜನೆ ಪ್ರಗತಿಯಲ್ಲಿದೆ. ನ್ಯಾಷನಲ್ ಹೆಲ್ತ್ ಮಿಷನ್ ವ್ಯಾಪ್ತಿಯಲ್ಲಿ ಜನನಿ ಸುರಕ್ಷಾ ಕಾರ್ಯಕ್ರಮ ಯೋಜನೆಯಲ್ಲಿ 6567 ತಾಯಂದಿರಿಗೆ, 1254 ನವಜಾತ ಶಿಶುಗಳಿಗೆ ಸಹಿತ 24,40,511 ರೂ. ವೆಚ್ಚ ಮಾಡಲಾಗಿದೆ. ಮಾತೃ ಯಾನಂ ಯೋಜನೆಗಾಗಿ 1034 ಮಂದಿಗೆ 6,98,390 ರೂ.ವೆಚ್ಚವಾಗಿದೆ ಎಂದು ತಿಳಿಸಲಾಯಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಬಡತನ ನಿವಾರಣೆ ವಿಭಾಗ ಯೋಜನೆ ನಿರ್ದೇಶಕ ಕೆ.ಪ್ರದೀಪನ್, ಎ.ಡಿ.ಸಿ. ಜನರಲ್ ಬೆವಿನ್ ಜೋನ್ ವರ್ಗೀಸ್ ಅವಲೋಕನಕ್ಕೆ ನೇತೃತ್ವ ನೀಡಿದರು. ಕಾಂಞಂಗಾಡ್ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಎಂ.ಗೌರಿ, ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಪಂಚಾಯತಿ ಡೆಪ್ಯೂಟಿ ಡೈರೆಕ್ಟರ್ ಟಿ.ಜೆ.ಅರುಣ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್, ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.


