ಪೆರ್ಲ: ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಭಾಷೆ, ಸಂಸ್ಕೃತಿ ಆಚಾರ ವಿಚಾರಗಳಿಗೆ ಅನುಗುಣವಾಗಿ, ಅವರವರ ಅನಾಕೂಲಗಳಿಗೆ ತಕ್ಕಂತೆ ಜೀವಿಸುವ ಎಲ್ಲಾ ಅವಕಾಶ, ಹಕ್ಕು ಇದೆ ಎಂದು ಖ್ಯಾತ ಯಕ್ಷಗಾನ ಅರ್ಥದಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾ ಸಂಸ್ಥೆಯ ಸ್ಥಾಪಕ ಸಂಚಾಲಕ, ಸ್ಥಾಪಕ ಮುಖ್ಯ ಶಿಕ್ಷಕ ದಿ.ಶಂಕರಮೋಹನದಾಸ ಆಳ್ವ ಅವರ ಇತ್ತೀಚೆಗೆ ನಡೆದ ದ್ವಿತೀಯ ಸಂಸ್ಮರಣೆ ಸಮಾರಂಭದಲ್ಲಿ ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ವಾಸುದೇವ ಭಟ್ 'ಶಿವ ಪಡ್ರೆ' ಅವರ 'ವಿಷ್ಣು ಚಿಂತನ' ಸಂಗ್ರಹ ಪುಸ್ತಕ ಪರಿಚಯಿಸಿ ಅವರು ಮಾತನಾಡಿದರು.
ಕಾಸರಗೋಡಿನಲ್ಲಿ ಕನ್ನಡಿಗರ ಅನುದಾನ, ಅವಕಾಶಗಳು ಕಡಿತವಾಗಿ ನಿರಂತರ ಶೋಷಣೆ ನಡೆಯುತ್ತಿದೆ.ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಲೆಯಾಳಿಕರಣ ನಡೆಯುತ್ತಿದೆ.ಕನ್ನಡಿಗರು ಶಿಕ್ಷಣ, ಉದ್ಯೋಗ ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ತಮ್ಮ ಅವಕಾಶ,ಅನುದಾನಗಳನ್ನು ಪಡೆಯಲು ಕನ್ನಡಿಗರು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಅವರದೇ ಭಾಷೆಯಲ್ಲಿ ಶಿಕ್ಷಣ ಪಡೆಯಲು, ಪರೀಕ್ಷೆ ಬರೆಯಲು, ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಬೇಕು.ಅತ್ಯುತ್ತಮ ಶಾಲೆ ಎಂದೇ ಹೆಸರು ಪಡೆದ ಕಾಟುಕುಕ್ಕೆಯಂತಹ ಗಡಿನಾಡಿನ ಶಾಲೆಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅದರದ್ದೇ ಆದ ಕೊಡುಗೆ ನೀಡಿದೆ.
ಗಡಿನಾಡಿನ ಅಲ್ಲಲ್ಲಿ ಹುಟ್ಟಿ ಬೆಳೆದ ಗಾಂಗಳು ಕನ್ನಡ ಭಾಷೆ ಉಳಿವು ಹಾಗೂ ಸಮಾಜದ ಶ್ರೇಯಸ್ಸಿಗೆ ಅವರವರದೇ ಆದ ಕೊಡುಗೆ ನೀಡಿದ್ದಾರೆ.ಅದೇ ರೀತಿ ಆಳ್ವರು ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಕಾಟುಕುಕ್ಕೆ ಗ್ರಾಮದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದ್ದಾರೆ.ಅತೃಪ್ತಿ ಎಂಬುದು ನಮ್ಮನ್ನು ಮತ್ತಷ್ಟು ಕ್ರಿಯಾಶೀಲರನಾಗಿಸುತ್ತದೆ ಎಂಬುದಕ್ಕೆ ಆಳ್ವರ ಜೀವನ ಪುಟಗಳೇ ಸಾಕ್ಷಿ. ಮನೆತನಗಳಿಂದ ಸಂಸ್ಕೃತಿ ಉಳಿದಿದೆ.ನಮ್ಮ ಪಾರಂಪರಿಕ ಜ್ಞಾನ, ವೈವಿಧ್ಯಮಯ ಸಾಂಸ್ಕಾರಿಕ ಸಂಪತ್ತನ್ನು ಸಂಗ್ರಹಿಸುವ, ಜೀವಂತವಾಗಿರಿಸುವ, ಮುಂದಿನ ತಲೆಮಾರಿಗೆ ದಾಟಿಸುವ ಮಹಾತ್ಕಾರ್ಯ ಕಾಲಕ್ಕೆ ತಕ್ಕಂತೆ ನಡೆಯಬೇಕು. ಸಂಸ್ಕೃತಿ ಅಧ್ಯಯನಶೀಲರಿಗೆ ಉಪಯುಕ್ತವಾದ 'ವಿಷ್ಣು ಚಿಂತನ' ಎಲ್ಲಾ ಮನೆಗಳಲ್ಲೂ ವ್ಯಾಪ್ತವಾಗಿ ಹರಡಿ ಸಂಸ್ಕೃತಿ ಚಿಂತನೆ ಬೆಳೆಯಲಿ ಎಂದರು.
ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಂಚತ್ತಾಯ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿ, ಕಲೆಯ ಅರಿವಿದ್ದಲ್ಲಿ ಪ್ರಪಂಚ ಸುತ್ತಬಹುದು.'ಶಿವ ಪಡ್ರೆ' ಯವರ ಸಾಧನೆಗಳನ್ನು ಮಾತಿನಲ್ಲಿ ಹೇಳಿ ಮುಗಿಸಲಾಗದು ಎಂದು ಹೇಳಿ ಕಾಟುಕುಕ್ಕೆ ಶಾಲೆಯ ಶಿಸ್ತು ವ್ಯವಸ್ಥೆಗಳನ್ನು ಕೊಂಡಾಡಿದರು.
ಪಾಣಾಜೆ ಸುಬೋಧ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. 'ಶಿವ ಪಡ್ರೆ' ಅವರ'ದೇವಶಂಕರ' ('ಕುಂಬಳೆ ಗಾಂ' ದಿ.ದೇವಪ್ಪ ಆಳ್ವ ಮತ್ತು ದಿ.ಶಂಕರ ಮೋಹನದಾಸ ಆಳ್ವರ ಸ್ಮರಣ ಸಂಚಿಕೆ 'ದೇವ ಶಂಕರ' ಸಂಗ್ರಹ ಪುಸ್ತಕವನ್ನು ನಿವೃತ್ತ ಪ್ರಿನ್ಸಿಪಾಲ್, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಪರಿಚಯಿಸಿ ಕರ್ನಾಟಕ ಮುಖ್ಯಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಬಿಡುಗಡೆ ಗೊಳಿಸಿದರು.
ದಿ.ಆಳ್ವ ಅವರ ಧರ್ಮ ಪತ್ನಿ ಕಮಲಾಕ್ಷಿ, ,ಕಾಟುಕುಕ್ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿ.ಸಂಜೀವ ರೈ, ವಿದ್ಯಾ ಸಂಸ್ಥೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್, ರಾಮಕೃಷ್ಣ ಶಿವಪ್ರಸಾದ್ ಆಳ್ವ, ಲಕ್ಷ್ಮೀ ನಾರಾಯಣ ಶೆಟ್ಟಿ, ಕೃಷ್ಣಪ್ರಸಾದ ಭಂಡಾರಿ ಸಾಜ, ಕುಟುಂಬ ಸದಸ್ಯರು, ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಪದಾಕಾರಿಗಳಾದ ಚಾಕಟೆ ಗೋಪಾಲಕೃಷ್ಣ ಭಟ್, ಬಿ.ಎಸ್.ಗಾಂಭೀರ, ಪಡ್ಪು ಶಿವರಾಮ ಭಟ್, ವಿನೋಬ ಶೆಟ್ಟಿ ದಂಬೆಕ್ಕಾನ, ಸಂದೇಶ್ ರೈ ಕಟ್ಟತ್ತಾಡೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾ ಸಂಸ್ಥೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಸ್ವಾಗತಿಸಿ, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಕೆ.ಪದ್ಮನಾಭ ಶೆಟ್ಟಿ ವಂದಿಸಿದರು.ಶಿಕ್ಷಕ ಎಚ್.ಲೋಕನಾಥ ಶೆಟ್ಟಿ ನಿರೂಪಿಸಿದರು.


