ಕುಂಬಳೆ: ಕೆನರ ಅಭಿವೃದ್ಧಿ ಮತ್ತು ಶಾಂತಿ ಸಂಸ್ಧೆ (ಸಿ.ಒ.ಡಿ.ಪಿ) ಮಂಗಳೂರು ಪ್ರವರ್ತಿತ ಸಂಗಮ ಮಹಾಸಂಘ ಮತ್ತು ಸಮೃದ್ಧಿ ಮಹಾಸಂಘ ಹಾಗೂ ಕಿಂಗ್ ಸರ್ಕಲ್ ಹೆಲ್ತ್ ಕೋರ್ಟ್ ಕುಂಬಳೆ ಇದರ ಜಂಟಿ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಸೂರಂಬೈಲ್ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಶಿಬಿರವನ್ನು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಎಡನಾಡು ಇದರ ಪ್ರಬಂಧಕ ಪ್ರಬಂಧಕ ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಮನುಷ್ಯನ ಶ್ರೇಷ್ಠವಾದ ಸಂಪತ್ತು. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ಅಧಿಕಾರಿ ಅಬ್ದುಲ್ ಕರೀಂ ಸೊಳ್ಳೆಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳು ಪರಿಸರ ಶುಚಿತ್ವ ಮತ್ತು ನಿರ್ಮೂಲನೆಯನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಪ್ರತಿಯೊಬ್ಬರು ಆರೋಗ್ಯ ತಪಾಸಣೆಯನ್ನು ಕಾಲಾಕಾಲಕ್ಕೆ ನಿರ್ವಹಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಂತೆ ಕರೆ ನೀಡಿದರು. ಸೂರಂಬೈಲ್ ಸರ್ಕಾರಿ ಹಿರಿಯ ಪ್ರೌಢಶಾಲೆಯ ಅಧ್ಯಾಪಕ ಕಿರಣ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವನಿತಾ ಸ್ವಾಗತಿಸಿ, ಅನಿತಾ ವಂದಿಸಿದರು. ವಿಜಯ ಕಾರ್ಯಕ್ರಮ ನಿರೂಪಿಸಿದರು. ಸಂಗಮ ಮಹಾಸಂಘದ ಅಧ್ಯಕ್ಷೆ ಚಂದ್ರಾವತಿ ಹಾಗೂ ಸಿ.ಒ.ಡಿ.ಪಿ ಸಂಸ್ಧೆಯ ಕಾರ್ಯಕರ್ತೆಯರಾದ ಆಶಾ ಮತ್ತು ಮಮತ ಉಪಸ್ಧಿತರಿದ್ದರು.


