ಕಾಸರಗೋಡು: ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸೂಕ್ತ ಅಳತೆಯಲ್ಲಿ ವಿತರಿಸುವ ಮೂಲಕ ಸಮಾಜದಲ್ಲಿ ಆಹಾರ ಸುರಕ್ಷೆ ಜಾರಿಗೆ ತರಲು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಆಹಾರ ಸುರಕ್ಷೆ ಆಯೋಗ ನಿರ್ಧರಿಸಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಆಯೋಗದ ಜನಜಾಗೃತಿ ಕಾರ್ಯಕ್ರಮ ಈ ವಿಚಾರಕ್ಕೆ ಆದ್ಯತೆ ನೀಡಿದೆ.
2013ರಲ್ಲಿ ದೇಶದಲ್ಲಿ ಜಾರಿಗೊಂಡ ಆಹಾರ ಭದ್ರತೆ ಕಾನೂನಿನ ತಳಹದಿಯಲ್ಲಿ ರಾಜ್ಯ ಆಹಾರ ಸುರಕ್ಷೆ ಆಯೋಗ ರಚನೆಗೊಂಡಿದೆ. ಲೋಪದೋಷ ಸರಿಪಡಿಸುವುದರ ಜೊತೆಗೆ ಆಹಾರ ಧಾನ್ಯಗಳ ತಪಾಸಣೆ ಇತ್ಯಾದಿ ಚಟುವಟಿಕೆ ನಡೆಸಲಾಗುತ್ತಿದೆ. ಆದಿವಾಸಿ ಜನಾಂಗಕ್ಕೆ ಆಹಾರ ಧಾನ್ಯಗಳ ವಿತರಣೆಗೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಪೋಷಕಾಹಾರ ಒದಗಿಸುವ ನಿಟ್ಟಿನಲ್ಲೂ ಆಯೋಗ ಚಟುವಟಿಕೆ ನಡೆಸುತ್ತಿದೆ ಎಂದು ಸಮಾರಂಭ ತಿಳಿಸಿದೆ.
ರಾಜ್ಯದ ಅಟ್ಟಪ್ಪಾಡಿಯಲ್ಲಿ ಅಂಗನವಾಡಿಯೊಂದರಲ್ಲಿ ಕಾಲಾವಧಿ ಕಳೆದ ಗೋಧಿ ವಿತರಣೆ ನಡೆಸಿದ ಪ್ರಕರಣ ಬಗ್ಗೆ ಸೆ.23ರಂದು ತಿರುವನಂತಪುರಂನಲ್ಲಿ ಆಯೋಗ ಅಹವಾಲು ಸ್ವೀಕಾರ ನಡೆಸಲಿದೆ ಎಂದು ತಿಳಿಸಲಾಯಿತು. ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಆಹಾರ ಸುರಕ್ಷೆ ಖಚಿತಪಡಿಸುವ ವಿಚಾರದಲ್ಲಿ ಆಯೋಗ ಪರಿಶೀಲನೆ ನಡೆಸಲಿದೆ ಎಂದು ಸಮಾರಂಭ ನುಡಿದಿದೆ.
ಆಯೋಗದ ಅಧ್ಯಕ್ಷ ಕೆ.ವಿ.ಮೋಹನ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ಸದಸ್ಯರಾದ ನ್ಯಾಯವಾದಿ ಪಿ.ವಸಂತಂ, ವಿ.ರಮೇಶ್, ಕೆ.ದಿಲೀಪ್ ಕುಮಾರ್, ನ್ಯಾಯವಾದಿ ಬಿ.ರಾಜೇಂದ್ರನ್, ಎಂ.ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಐ.ಸಿ.ಡಿಎಸ್. ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ವರದಿ ವಾಚಿಸಿದರು. ಪಡಿತರ ಅಂಗಡಿ ಮಾಲೀಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಯಿತು.


