ಕಾಸರಗೋಡು: ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್ ನಲ್ಲಿ ಒಟ್ಟು 54 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ 11 ಕೇಸುಗಳಿಗೆ ತೀರ್ಪು ನೀಡಲಾಗಿದೆ. 6 ಪ್ರಕರಣಗಳಲ್ಲಿ ಬೇರೆ ಬೇರೆ ಇಲಖೆಗಳು ವರದಿ ನೀಡುವಂತೆ ತಿಳಿಸಲಾಗಿದೆ. 37 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ ಎಂದು ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ತಿಳಿಸಿದರು.
ಈ ಪ್ರಕರಣಗಳಲ್ಲಿ ಕಳೆದ ಬಾರಿಯ ಅದಾಲತ್ ನಲ್ಲಿ ಪರಿಶೀಲಿಸಲಾಗಿದ್ದ ನಡಕ್ಕಾವಿನಖಾಸಗಿ ಕಂಪನಿಯೊಂದರಲ್ಲಿ ಮಹಿಳಾ ನೌಕರರಿಗೆ ವೇತನ ಲಭಿಸದೇ ಇರುವ ಪ್ರಕರಣವೊಂದಕ್ಕೆ ಸುಖಾಂತ್ಯವಾಗಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಅವರ ಸಮಕ್ಷದಲ್ಲಿ ದೂರುದಾತರು ಮತ್ತು ಕಂಪನಿಯ ಪದಾಧಿಕಾರಿಗಳು ಸಂಧಾನಕ್ಕೆ ಒಪ್ಪಿದ್ದು, ವೇತನ ನೀಡಲಾಗಿದೆ ಎಂದು ವರದಿ ಸಲ್ಲಿಸಲಾಗಿದೆ ಎಂದರು.
ಇನ್ನೊಂದು ಪ್ರಕರಣದಲ್ಲಿ ಪತ್ನಿಯ ಹೆಸರಿನ ಜಾಗದಲ್ಲಿ ಮಕ್ಕಳೊಂದಿಗೆ ವಾಸವಾಗಿರುವ ಪತಿ, ಮಡದಿಯನ್ನು ಮನೆಯಿಂದ ಹೊರದಬ್ಬಿದ ಪರಿಣಾಮ ಅವರು ತಾತ್ಕಾಲಿಕ ಶೆಡ್ಡೊಂದರಲ್ಲಿ ಅನಾಥ ಸ್ಥಿತಿಯಲ್ಲಿ ಬದುಕಬೇಕಾಗಿ ಬಂದ ಪ್ರಕರಣ ಬಗೆಹರಿದಿದೆ. ಅದಾಲತ್ ನಡೆದ ವೇಳೆ ಆಯೋಗದ ಮಾತುಕತೆಗೆ ಬಗ್ಗದ ಪತಿ ಒತ್ತಾಯಿಸಿದರೆ ಆತ್ಮಹತ್ಯೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆಯೋಗದ ವಿನಂತಿಯಂತೆ ಪೊಲೀಸರು ಆಗಮಿಸಿದಾಗ ತನ್ನ ನಿಲುವನ್ನು ಬದಲಿಸಿದ ಆರೋಪಿ ಪತಿ ಪತ್ನಿಯನ್ನು ಮನೆಗೆ ಮರಳಿ ಕರೆತರಲು ಒಪ್ಪಿದ್ದರು. ಈ ಬಗ್ಗೆ ನಿಗಾ ಇರಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಷಾಹಿದಾ ಕಮಾಲ್ ತಿಳಿಸಿದರು.
ವಾರೆಂಟ್ ಆರೋಪಿಯೊಬ್ಬರನ್ನು ಹುಡುಕಿ ಬಂದ ಪೊಲೀಸರ ಮೇಲೆಯೇ ಮಹಿಳೆಯೊಬ್ಬರು ಆರೋಪ ಹೊರಿಸಿದ ಪ್ರಕರಣವನ್ನು ಪರಿಶೀಲಿಸಿದ ಆಯೋಗ ಈ ಬಗ್ಗೆ ದೂರುದಾತರಿಗೆ ಮನವರಿಕೆ ನಡೆಸಿ, ಬಂಧಿತ ಆರೋಪಿಯನ್ನು ಬಂಧಿಸುವಲ್ಲಿ ಸಹಕರಿಸುವಂತೆ ಬುದ್ಧಿಮಾತು ಹೇಳಿ ಕಳುಹಿಸಿದೆ. ಮಗದೊಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯ ದೋಷದಿಂದ ಬೇರೆ ಬೇರೆ ಪ್ರಕರಣಗಳಲ್ಲಿ 20 ಮಹಿಳೆಯರು ಮೃತಪಟ್ಟಿರುವುದಾಗಿ ದೂರು ಲಭಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲ ವೈದ್ಯಾಧಿಕಾರಿ ಅವರಿಗೆ ಆದೇಶ ನೀಡಿರುವುದಾಗಿ ಷಾಹಿದಾ ಅವರು ತಿಳಿಸಿದರು. ಈ ವರದಿ ಲಭಿಸಿದ ನಂತರ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದರು.
ಕೌಟುಂಬಿಕ ಸಮಸ್ಯೆಗಳು ಮತ್ತು ಆಸ್ತಿ ವಿವಾದಗಳು ಅಧಿಕವಾಗಿದ್ದುವು. ಕೆಲವು ದೂರುಗಳು ಮಹಿಳಾ ಆಯೋಗದ ವ್ಯಾಪ್ತಿಗೆ ಬರದೇ ಇರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳಿಗೆ ದೂರು ನೀಡುವಂತೆ ದೂರುದಾತರಿಗೆ ತಿಳಿಸಲಾಗಿದೆ ಎಂದವರು ನುಡಿದರು.

