ಕಾಸರಗೋಡು: ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಡುವ ಪಿಡುಗು ಇಂದಿಗೂ ಕಾಸರಗೋಡು ಜಿಲ್ಲೆಯಲ್ಲಿ ಜೀವಂತವಾಗಿರುವುದು ಶೈಕ್ಷಣಿಕ, ಸಾಮಾಜಿಕ ದುರಂತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಶಾಹಿದಾ ಕಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯೋಗದ ಅದಾಲತ್ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಬೆಳೆಯುತ್ತಿರುವಂತೆಯೇ ಅವರು ಹೆತ್ತವರಿಗೆ ಭಾರವಾಗುತ್ತಾರೆ ಎಂಬ ಭ್ರಮೆ ಇದಕ್ಕೆ ಪ್ರಧಾನ ಕಾರಣ. ಕಾಸರಗೋಡು ಜಿಲ್ಲೆಯಲ್ಲಿ ಕೆಲವು ಹೆತ್ತವರಲ್ಲಿ ಇಂದಿಗೂ ಈ ಮನೋಧರ್ಮ ಮನೆಮಾಡಿದೆ. ಇದರಿಂದ ಹೆಣ್ಣುಮಕ್ಕಳು ಶಿಕ್ಷಣ ಸಹಿತ ಪ್ರಧಾನ ವಾಹಿನಿಯ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸುವ ಬಗ್ಗೆ ಆಯೋಗ ವ್ಯಾಪಕ ಯತ್ನ ನಡೆಸಿಕೊಂಡುಬರುತ್ತಿದೆ. ಇದರ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಪಂಚಾಯತ್ ಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಮಗಳು ನಡೆದುಬರುತ್ತಿವೆ ಎಂದು ಅವರು ಹೇಳಿದರು.
ಈ ಬಾರಿಯ ಮಹಿಳಾ ಆಯೋಗ ರಚನೆಗೊಂಡ ನಂತರ ಈ ಸಂಬಂಧ ಹೆತ್ತವರಲ್ಲಿ ಜಾಗೃತಿಮೂಡಿಸಿ ಹೆಣ್ಣುಮಕ್ಕಳನ್ನು ಇಂಥಾ ಪಿಡುಗಿನಿಂದ ಬಿಡುಗಡೆಗೊಳಿಸಿ, ಶಿಕ್ಷಣ ವಲಯದತ್ತ ಮರಳುವಂತೆ ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು.
ಇದೇ ವೇಳೆ ಮದುವೆಯಾಗಿ ಮಗುವೂ ಜನಿಸಿದ ನಂತರ ಪತಿನಾಪತ್ತೆಯಾಗುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಕ್ರಮ ಬಿಗಿಗೊಳಿಸುವುದಾಗಿ ಎಂದು ಅವರು ಹೇಳಿದರು. ಆಯೋಗದ ಅದಾಲತ್ ನ ನಂತರವೂ ಈ ಸಂಬಂಧ ಕ್ರಮಗಳನ್ನು ಮುಂದುವರಿಸುವಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾಡಳಿತೆ ನೀಡುತ್ತಿರುವ ಬೆಂಬಲ ಶ್ಲಾಘನೀಯ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಸಿ.ಎಂ.ರಾಧಾ, ಎ.ಪಿ.ಉಷಾ, ಬೀನಾ ಕೆ.ಜಿ. ಮೊದಲಾದವರು ಉಪಸ್ಥಿತರಿದ್ದರು.

