ಬದಿಯಡ್ಕ: `ಹೆತ್ತ ತಾಯಿಗಿಂತ ಅಧಿಕ ಮಾಯೆ ಉಂಟೇ, ಕುದುರೆಗೆ ಕತ್ತೆ ಹೋಲುವುದುಂಟೇ' ಎಂದು ದಾಸವರೇಣ್ಯರು ತಾಯಿಯನ್ನು ವರ್ಣಿಸುತ್ತಾರೆ. `ಸಮುದ್ರಕ್ಕೆ ಸಮುದ್ರವೇ ಉಪಮೆ-ತಾಯಿಗೆ ತಾಯಿಯೇ ಉಪಮೆ' ಎಂದು ಚಲನಚಿತ್ರ ನಿರ್ದೇಶಕರೂ, ನಟರೂ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರೂ ಆಗಿರುವ ಕಾಸರಗೋಡು ಚಿನ್ನಾ ಹೇಳಿದರು.
ಅವರು ಬದಿಯಡ್ಕದ ಖ್ಯಾತ ಕವಿ, ಸಾಹಿತಿ, ದಿ.ಬಿ.ಕೃಷ್ಣ ಪೈ ಅವರ `ಸುಕನ್ಯಾ ಸದನ'ದಲ್ಲಿ ಏರ್ಪಡಿಸಿದ `ಘರ್ ಘರ್ ಕೊಂಕಣಿ' ಇದರ 139 ನೇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಹೆತ್ತ ತಾಯಿ ನಮ್ಮ ಸಂಸ್ಕøತಿಯ ಪ್ರತೀಕ. ಆಕೆ ಕಲಿಸಿದ ಭಾಷೆಯೇ ಅತ್ಯಂತ ಶ್ರೇಷ್ಠ ಭಾಷೆ. ಭಾಷೆ ಕಲಿಸಿದ ತಾಯಿಯನ್ನು ಗೌರವಿಸಬೇಕು. ಭಾರತೀಯ ಸಂಸ್ಕøತಿಯೇ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಸಂಸ್ಕøತಿಯನ್ನು ಉಳಿಸುವ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿ ಹೇಳಬೇಕಾದ ಕರ್ತವ್ಯ ಎಲ್ಲರದಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಜ್ಞಾನದೇವ ಶೆಣೈ `ಘರ್ ಘರ್ ಕೊಂಕಣಿ' ಕಾರ್ಯಕ್ರಮಗಳು ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿದೆ. ಭಾಷೆಯ ಬಗ್ಗೆ, ಸಂಸ್ಕøತಿಯ ಕುರಿತು ಜಾಗೃತಿ ಮೂಡಿಸಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಚಿನ್ನಾ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಕಾಯಕ ಅಭಿನಂದನೀಯ ಎಂದರು. ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ಸುಂದರ ಪ್ರಭು, ಸುಕನ್ಯಾ ಪೈ ಮಾತನಾಡಿದರು.
ಶ್ರೀಧರ ಪೈ ಬಳ್ಳಂಬೆಟ್ಟು, ಹರೀಶ್ ಪೆರ್ಲ, ನಿರುಪಮಾ ಶೆಣೈ, ಬಿ.ಗಣೇಶ ಶೆಣೈ ಸ್ವರಚಿತ ಕೊಂಕಣಿ ಕವನಗಳನ್ನು ವಾಚಿಸಿದರು. ಜ್ಯೋತಿ ಶೆಣೈ, ಗೀತಾ ಕಾಮತ್, ರಾಮ ಗಣೇಶ ಪ್ರಭು ಕೊಂಕಣಿ ಗೀತೆಗಳನ್ನು ಹಾಡಿದರು.
ಘರ್ ಘರ್ ಕೊಂಕಣಿಯ ರೂವಾರಿ ಕಾಸರಗೋಡು ಚಿನ್ನಾ ಅವರನ್ನು ಮನೆಯವರ ವತಿಯಿಂದ ಶಾಲು ಹೊದಿಸಿ, ಹಣ್ಣುಹಂಪಲನ್ನು ನೀಡಿ ಗೌರವಿಸಲಾಯಿತು. ಕೊಂಕಣಿ ಕವಿ, ಮನೆಯ ಯಜಮಾನ ಬಿ.ಗಣೇಶ ಪೈ ಸ್ವಾಗತಿಸಿ, ವಂದಿಸಿದರು. ಉನ್ನತಿ ಜಿ.ಪೈ, ತೇಜಸ್ ಜಿ.ಪೈ ಪ್ರಾರ್ಥನೆ ಹಾಡಿದರು.


