ಪೆರ್ಲ: ಸಂಘಟಿತ ಪ್ರಯತ್ನದಿಂದ ಯಾವುದೇ ಕಠಿಣ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀ ಕೃಷ್ಣ ಗುರೂಜಿ ತಿಳಿಸಿದರು.
ಅವರು ಬಿಲ್ಲವ ಸೇವಾ ಸಂಘ ಎಣ್ಮಕಜೆ ಪಂಚಾಯತಿ ಸಮಿತಿ ವತಿಯಿಂದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಆರೋಗ್ಯ ಸಂರಕ್ಷಣೆಯಿಂದ ಮಾತ್ರ ಸಂತೃಪ್ತ ಜೀವನ ಸಾಗಿಸಲು ಸಾಧ್ಯ. ನಮ್ಮೊಳಗಿರುವ ಶತ್ರುತ್ವವನ್ನು ಹೋಗಲಾಡಿಸಿ, ಜೀವನದಲ್ಲಿ ಎದುರಾಗುವ ಜಟಿಲ ಸಮಸ್ಯೆಗಳಿಗೆ ಎದೆಗುಂದದೆ, ಮುನ್ನಡೆಯುವ ಮನೋಬಲ ಪ್ರತಿಯೊಬ್ಬ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಸಂಘಟನೆಯ ಅಧ್ಯಕ್ಷ ಶಿವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ನಾರಾಯಣಗುರುಗಳ ಆದರ್ಶ ಪಾಲನೆಯಿಂದ ಸಂಘಟನೆಗಳನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಸಂಘಟನೆ ಮೂಲಕ ಮುಂದಿನ ದಿನಗಳಲ್ಲಿ ಮಹತ್ತರ ಕೆಲಸಗಳನ್ನು ಹಮ್ಮಿಕೊಳ್ಳಲು ಯೋಜನೆಯಿರಿಸಿ ಕೊಂಡಿರುವುದಾಗಿ ತಿಳಿಸಿದರು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶ್ರೀ ನಾರಾಯಣಗುರುಗಳ ಆದರ್ಶದಂತೆ, ಎಲ್ಲ ಸಮುದಾಯದ ಜನತೆಗೂ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಸಂಘಟನೆ ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರ, ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು. ಶಾಲಾ ಪ್ರಬಂಧಕ ಪಿ.ಎಸ್.ವಿಶ್ವಾಮಿತ್ರ, ಹೀಲ್ಸ್ ಸಂಘಟನೆ ಅಧ್ಯಕ್ಷ ಅಜಿತ್ ಇರಾ, ಬಿಲ್ಲವ ಎಂಪೆÇ್ಲೀಯಿಸ್ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ರಾಮ್‍ಮೋಹನ್ ವೈ, ಸುರತ್ಕಲ್ ಎನ್‍ಐಟಿಕೆ ಪ್ರಾಧ್ಯಾಪಕ ಡಾ.ರವಿಶಂಕರ್ ಕೆ.ಎಸ್, ಮಣಿಪಾಲ ಕೆಎಂಸಿ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಬಿ.ಪಿ ಶೇಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೂಜಾರಿ ಕುದ್ವ ವಂದಿಸಿದರು. ಪುಣ್ಯಭೂಮಿ ತುಳುನಾಡು ಸೇವಾ ಫೌಂಡೇಶನ್ ಮಂಗಳೂರು, ಬಿಲ್ಲವ ಎಂಪೆÇ್ಲೀಯಿಸ್ ವೆಲ್ಪೇರ್ ಅಸೋಸಿಯೇಶನ್ ಹಾಗೂ ಹೀಲ್ಸ್ ಮಂಗಳೂರು ಸಹಯೋಗ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ, ಸಮುದಾಯ ದಂತ ವಿಭಾಗ-ಕೆಎಂಸಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅತ್ತಾವರ ಮಂಗಳೂರು ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಂತ ತಪಾಸಣೆ ಮತ್ತು ಚಿಕಿತ್ಸೆ, ಸಾಮಾನ್ಯ ವೈದ್ಯಕೀಯ ವಿಭಾಗ, ರಕ್ತದೊತ್ತಡ-ಮಧುಮೇಹ ತಪಾಸಣೆ, ನೇತ್ರವಿಭಾಗ, ಸ್ತ್ರೀರೋಗ ವಿಭಾಗಗಳಲ್ಲಿ 250ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.


